ಜಿಲ್ಲೆ

ಹುತಾತ್ಮ ಭಾರತೀಯ ಯೋಧರಿಗೆ ಶ್ರದ್ಧಾಂಜಲಿ

ಮಡಿಕೇರಿ: ಚೀನಾ ಸೈನಿಕರ ದಾಳಿಗೆ ಹುತಾತ್ಮರಾದ ಭಾರತೀಯ ಯೋಧರಿಗೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಶುಕ್ರವಾರ ನಗರದ ಯುದ್ಧ ಸ್ಮಾರಕದಲ್ಲಿ ಶ್ರದ್ಧಾಂಜಲಿ ಸಲ್ಲಿಸಿತು.

ಈ ಸಂದರ್ಭ ಸ್ಮಾರಕಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್, ಚೀನಿಯರು ರಾಜ್ಯ ಧರ್ಮವನ್ನು ಮರೆತು ಉಭಯ ದೇಶಗಳ ಸೌಹಾರ್ದ ತಿರಸ್ಕಾರ ಮಾಡಿ ಯುದ್ಧ ಸಾರಿದ್ದಾರೆ. ಏಕಾಏಕಿ ಭಾರತೀಯ ಯೋಧರ ಮೇಲೆ ದಾಳಿಗೆ ಮುಂದಾಗಿರುವ ಚೀನಿಯರ ಕೃತ್ಯದ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಸಾರ್ವಭೌಮತೆಗೆ ಧಕ್ಕೆಯಾಗದಂತೆ ಚೀನಾ ದೇಶಕ್ಕೆ ಎಚ್ಚರಿಕೆ ನೀಡಬೇಕು ಎಂದು ಒತ್ತಾಯಿಸಿದರು.

ಚೀನಾ ಸೈನಿಕರು ಕುತಂತ್ರದಿಂದ ಭಾರತೀಯ ಯೋಧರನ್ನು ಸೋಲಿಸಲು ಪ್ರಯತ್ನಿಸಿದ್ದರು. ಈ ಕುತಂತ್ರಕ್ಕೆ ಭಾರತೀಯ ಯೋಧರು ತಕ್ಕ ಉತ್ತರ ನೀಡಿ ಚೀನಿಯರನ್ನು ಬಗ್ಗು ಬಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.

ಇಡೀ ವಿಶ್ವಕ್ಕೆ ಕರೊನಾ ಮಹಾಮಾರಿಯನ್ನು ಹಬ್ಬಿ ಇದೀಗ ಈ ಘಟನೆ ಮರೆಮಾಚಲು ಯುದ್ಧ ಸಾರುತ್ತಿದ್ದಾರೆ. ಈವರೆಗೆ ಹುತಾತ್ಮರಾದ 20 ಯೋಧರ ಬಲಿದಾನಕ್ಕೆ ತಕ್ಕ ಪ್ರತ್ಯುತ್ತರ ನೀಡಬೇಕು. ಈ ವಿಚಾರದಲ್ಲಿ ವಿಶ್ವ ಸಂಸ್ಥೆಯು ಮುಂದಾಗಿ ದೇಶಗಳ ನಡುವೆ ಶಾಂತಿ ನೆಲೆಸಲು ಮುಂದಾಗಬೇಕು ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ಟಿ.ಪಿ.ರಮೇಶ್, ವಿರಾಜಪೇಟೆ ಬ್ಲಾಕ್ ವೀಕ್ಷಕ ಪಿ.ರಾಜು, ತನ್ನಿರಾ ಮೈನಾ, ಸುರಯ್ಯ ಅಬ್ರಾರ್ ಮತ್ತಿತರರು ಇದ್ದರು.