ವಿಜಯವಾಣಿ ಸುದ್ದಿಜಾಲ ಧಾರವಾಡ
ತ್ಯಾಗ, ಬಲಿದಾನದ ಪ್ರತೀಕವಾದ ಮೊಹರಂ ಹಬ್ಬವನ್ನು ಬುಧವಾರ ನಗರದಲ್ಲಿ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.
ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸೇರಿದ ಜನತೆ, ಮೊಹರಂ ದೇವರಗಳನ್ನು (ಪಂಜಾ) ಹೊತ್ತು ಗಲ್ಲಿಗಳಲ್ಲಿ ಸಾಗಿದರು. ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ದೇವರ ದರ್ಶನ ಪಡೆದ ಜನರು, ತಮ್ಮ ಹರಕೆಗಳನ್ನು ಈಡೇರಿಸುವಂತೆ ಪ್ರಾರ್ಥಿಸಿದ ದೃಶ್ಯ ಕಂಡು ಬಂದಿತು. ಗ್ರಾಮೀಣ ಪ್ರದೇಶದಲ್ಲಿ ಡೋಲಿಗಳ ಮೆರಣಿಗೆ ನಂತರ ದೇವರನ್ನು ಹೊಳೆಗೆ ತೆಗೆದುಕೊಂಡು ಹೋಗುವ ಸಂಪ್ರದಾಯ ನಡೆಯಿತು.
ಗಮನ ಸೆಳೆದ ಮೆರವಣಿಗೆ: ಧಾರವಾಡದ ಮಾಳಾಪುರ, ಮದಿಹಾಳ, ಟಿಪ್ಪು ವೃತ್ತ, ಸಿಬಿಟಿ ವೃತ್ತ, ಕಾಮನಕಟ್ಟಿ, ಭೂಸಪ್ಪ ಚೌಕ, ಹೆಬ್ಬಳ್ಳಿ ಅಗಸಿ, ಕಿಲ್ಲಾದ ಹಟೇಲ್ ಭಾಷಾ ದರ್ಗಾ, ಜನ್ನತ್ ನಗರ ದರ್ಗಾ ಸೇರಿ ವಿವಿಧೆಡೆ ಮೊಹರಂ ಸಡಗರ ಮನೆ ಮಾಡಿತ್ತು. ಹೂವುಗಳಿಂದ ಅಲಂಕರಿಸಿದ ಪಂಜಾಗಳ ಮೆರವಣಿಗೆ ಗಮನ ಸೆಳೆಯಿತು.
ದೇಹ ದಂಡಿಸಿ ಆಚರಣೆ: ಇರಾನಿ ಸಮುದಾಯದವರು ಮೊಹರಂ ಅನ್ನು ಆಯುಧಗಳಿಂದ ದೇಹಕ್ಕೆ ಹೊಡೆದುಕೊಂಡು ರಕ್ತ ಸುರಿಸಿ ಭಕ್ತಿ ನಮನ ಸಲ್ಲಿಸಿದರು. ಜನ್ನತ್ ನಗರದ ಮಸೀದಿಯಿಂದ ಆರಂಭವಾದ ಮೆರವಣಿಗೆ ಟೋಲ್ ನಾಕಾ ಮಾರ್ಗವಾಗಿ ಹೊಸಯಲ್ಲಾಪುರ ನುಚ್ಚಂಬ್ಲಿ ಬಾವಿವರೆಗೆ ಸಾಗಿತು.