ಜಿಲ್ಲೆ

ಮೈಸೂರಿನಲ್ಲಿ ಏ.21 ರಿಂದ 24ರವರೆಗೆ ತುಂತುರು ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

ಮೈಸೂರು: ಜಿಲ್ಲೆಯಲ್ಲಿ ಏ.21 ರಿಂದ 24ರವರೆಗೆ ಮೋಡ ಕವಿದ ವಾತಾವರಣ ಕಾಣಿಸಿಕೊಂಡು ತುಂತುರು ಮಳೆ ಸುರಿಯಲಿದ್ದು, ತಾಪಮಾನ ಎಂದಿನಂತೆ ಮುಂದುವರೆಯಲಿದೆ. ಹೀಗಾಗಿ ಕೃಷಿ ಚಟುವಟಿಕೆ ಕೈಗೊಂಡಿರುವ ರೈತರು ಬೆಳೆಗಳನ್ನು ಉಳಿಸಿಕೊಳ್ಳಲು ಅಗತ್ಯ ಮುಂಜಾ ್ರತಾ ಕ್ರಮ ವಹಿಸುವಂತೆ ಭಾರತೀಯ ಹವಾಮಾನ ಇಲಾಖೆ ಸಲಹೆ ನೀಡಿದೆ.

ಜಿಲ್ಲೆಯಲ್ಲಿ ಏ.21, 22 ರಂದು ತಲಾ 3 ಮಿ.ಮೀ., 23 ಮತ್ತು 24 ರಂದು ತಲಾ 2 ಮಿ.ಮೀ. ಮಳೆಯಾಗುವ ನಿರೀಕ್ಷೆ ಇದೆ. ಏ.21 ರಂದು ಕನಿಷ್ಠ 23, ಗರಿಷ್ಠ 36.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುವ ನಿರೀಕ್ಷೆ ಇದೆ ಏ.22 ರಂದು ಕನಿಷ್ಠ 22.6, ಗರಿಷ್ಠ 37.7, ಏ.23 ರಂದು ಕನಿಷ್ಠ 22.4, ಗರಿಷ್ಠ 38, ಏ.24 ರಂದು ಕನಿಷ್ಠ 22, ಗರಿಷ್ಠ 38 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ನಿರೀಕ್ಷೆ ಇದೆ.

ತಾಲೂಕುವಾರು ವಿವರ:

ಎಚ್.ಡಿ. ಕೋಟೆ ತಾಲೂಕಿನಲ್ಲಿ ಏ.21 ರಂದು 1.9 ಮಿ.ಮೀ., 22 ರಂದು 0.8 ಮಿ.ಮೀ. ಮಳೆಯಾಗುವ ಸಾಧ್ಯತೆ ಇದ್ದು, 23 ರಂದು ಮಳೆಯ ಮುನ್ಸೂಚನೆ ಇಲ್ಲ. ಏ.24 ರಂದು 1.4 ಮಿ.ಮೀ. ಮಳೆಯಾಗುವ ನಿರೀಕ್ಷೆ ಇದೆ. ಅದೇ ರೀತಿ ಹುಣಸೂರಿನಲ್ಲಿ ಏ.21 ರಂದು 0.4, 22 ರಂದು 0.5 ಮಿ.ಮೀ. ಮಳೆಯಾಗುವ ಮುನ್ಸೂಚನೆ ಇದ್ದು, 23 ರಂದು 0 ಮಳೆಯ ಮುನ್ಸೂಚನೆ ಇಲ್ಲ. ಏ. 24 ರಂದು 0.9 ಮಿ.ಮೀ. ಮಳೆಯಾಗುವ ಸಾಧ್ಯತೆ ಇದೆ.

ಕೆ.ಆರ್. ನಗರದಲ್ಲಿ ಏ.21 ರಂದು 2.2, 22 ರಂದು 0.9 ಮಿ.ಮೀ. ಮಳೆಯಾಗಲಿದ್ದು, ಏ.23 ಮತ್ತು 24 ರಂದು ಮಳೆಯ ಮುನ್ಸೂಚನೆ ಇಲ್ಲ. ಮೈಸೂರಿನಲ್ಲಿ ಏ.21 ರಂದು 0.5, 22 ರಂದು 3, ಏ.23 ಮತ್ತು 24 ರಂದು ಮಳೆ ಸುರಿಯುವ ಸಾಧ್ಯತೆ ಇಲ್ಲ. ನಂಜನಗೂಡಿನಲ್ಲಿ ಏ.21 ರಂದು 0.1 ಮಳೆಯಾಗಲಿದ್ದು, ಏ.22 ರಿಂದ 24ರವರೆಗೆ ಮಳೆಯ ಮುನ್ಸೂಚನೆ ಇಲ್ಲ. ಪಿರಿಯಾಪಟ್ಟಣದಲ್ಲಿ ಏ.22 ರಂದು 0.4 ಮಿ.ಮೀ. ಮಳೆಯಾಗುವ ಸಾಧ್ಯತೆ ಇದ್ದು, ಏ.21, 23 ಮತ್ತು 24 ರಂದು ಮಳೆಯ ಮುನ್ಸೂಚನೆ ಇಲ್ಲ. ತಿ.ನರಸೀಪುರದಲ್ಲಿ ಏ.21, 22 ರಂದು ತಲಾ 0.5, 23 ರಂದು 0.6 ಮಿ.ಮೀ. ಮಳೆಯಾಗುವ ಸಾಧ್ಯತೆ ಇದ್ದು, ಏ.24 ರಂದು ಮಳೆಯ ಮುನ್ಸೂಚನೆ ಇಲ್ಲ.

ರೈತರಿಗೆ ಹವಾಮಾನ ಇಲಾಖೆ ಸಲಹೆ

ಬಿಸಿಲಿನ ತಾಪ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಬೇಸಿಗೆ ಸಂದರ್ಭದಲ್ಲಿ ಯಾವ ರೀತಿ ಕೃಷಿ ಚಟುವಟಿಕೆ ಕೈಗೊಳ್ಳಬೇಕು ಎಂಬ ಕುರಿತು ಭಾರತೀಯ ಹವಾಮಾನ ಇಲಾಖೆಯ ನಾಗನಹಳ್ಳಿಯ ಕೃಷಿ ಹವಾಮಾನ ಕ್ಷೇತ್ರ ವಿಭಾಗದ ಹಿರಿಯ ಕ್ಷೇತ್ರ ಅಧೀಕ್ಷಕ ಡಾ.ಸಿ. ರಾಮಚಂದ್ರ ರೈತರಿಗೆ ಅಗತ್ಯ ಸಲಹೆ ನೀಡಿದ್ದಾರೆ.

ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರು ಬೆಳೆಗಳಿಗೆ ಸಮರ್ಪಕವಾಗಿ ನೀರು ಪೂರೈಕೆ ಮಾಡುತ್ತಿರುವುದನ್ನು ಖಚಿತಪಡಿಸಿಕೊಳ್ಳ ೇಕು. ಆವಿಯಾಗುವಿಕೆಯ ಮೂಲಕ ನೀರಿನ ನಷ್ಟವನ್ನು ಕಡಿಮೆ ಮಾಡಲು ಹನಿ ನೀರಾವರಿ ಅಳವಡಿಸಿಕೊಳ್ಳುವುದು ಸೂಕ್ತ. ಹೆಚ್ಚಿನ ತಾಪಮಾನ ತಡೆದುಕೊಳ್ಳಬಲ್ಲ, ಬರ ನಿರೋಧಕ ಅಥವಾ ಶಾಖ ಸಹಿಷ್ಣು ಬೆಳೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ ಎಂದು ರೈತರಿಗೆ ಸಲಹೆ ನೀಡಿದ್ದಾರೆ.

ಜಾನುವಾರುಗಳಿಗೆ ಸಾಕಷ್ಟು ನೆರಳು, ನೀರು ದೊರೆಯುವಂತೆ ಮಾಡಬೇಕು. ಬಿಸಿಲು ಹೆಚ್ಚಾಗಿರುವುದರಿಂದ ಮಧ್ಯಾಹ್ನ ರಾಸುಗಳಿಗೆ ನೀರು ಹೊಡೆಯಬೇಕು, ಕೊಟ್ಟಿಗೆಯ ನೆಲ ಹಾಗೂ ಗೋಡೆಗಳಿಗೂ ನೀರು ಹೊಡೆಯಬೇಕು. ರಾಸುಗಳನ್ನು ಬೆಳಗ್ಗೆ ಹಾಗೂ ಸಂಜೆ ಮಾತ್ರ ಹೊರಗೆ ಮೇಯಲು ಬಿಡಬೇಕು. ಕೋಳಿ ಮನೆಗಳಲ್ಲಿ ಸಾಕಷ್ಟು ನೆರಳು ಹಾಗೂ ಗಾಳಿಯಾಡುವಂತೆ ಮಾಡಬೇಕು. ಕೋಳಿ ಮನೆಯ ಪರಿಸರವನ್ನು ತಂಪಾಗಿಸಲು ಫ್ಯಾನ್ ಅಥವಾ ಮಿಸ್ಟಿಂಗ್ ಸಿಸ್ಟಮ್ ಅಳವಡಿಸುವುದು ಸೂಕ್ತ. ಪಕ್ಷಿಗಳಿಗೆ ಕುಡಿಯಲು ತಂಪಾದ ಹಾಗೂ ಶುದ್ಧವಾದ ನೀರು ನೀಡಬೇಕು. ಮುಂದಿನ 4 ದಿನಗಳವರೆಗೆ ಶುಷ್ಕ ಹವಾಮಾನ ಇರುವ ಸಾಧ್ಯತೆ ಹಿನ್ನೆಲೆಯಲ್ಲಿ ವರ್ಮಿ ಕಾಂಪೋಸ್ಟ್ ಹೊಂಡಗಳಲ್ಲಿ ಶೇ.60 ರಷ್ಟು ತೇವಾಂಶ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.