ಜಿಲ್ಲೆ

ಮೈಸೂರಿನಲ್ಲಿ ಜೂನ್ 29 ರಿಂದ ಜುಲೈ 3ರವರೆಗೆ ತುಂತುರು ಮಳೆ ಸಾಧ್ಯತೆ

ಮೈಸೂರು: ಜಿಲ್ಲೆಯಲ್ಲಿ ಜೂನ್ 29 ರಿಂದ ಜುಲೈ 3ವರೆಗೆ ಮೋಡ ಕವಿದ ವಾತಾವರಣ ಕಾಣಿಸಿಕೊಂಡು ತುಂತುರು ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದರೆ, ವಯನಾಡು ಹಾಗೂ ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿಯುತ್ತಿರುವುದು ಜಿಲ್ಲೆಯ ರೈತಾಪಿ ವರ್ಗದವರಲ್ಲಿ ಮಂದಹಾಸ ಮೂಡಿಸಿದೆ.

ಭಾರತೀಯ ಹವಾಮಾನ ಇಲಾಖೆಯ ನಾಗನಹಳ್ಳಿಯ ಕೃಷಿ ಹವಾಮಾನ ಕ್ಷೇತ್ರ ವಿಭಾಗದ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಜೂ.29 ರಿಂದ ಜು.1ರವರೆಗೆ ತಲಾ 2 ಮಿ.ಮೀ., ಜು.2 ಮತ್ತು 3 ರಂದು ತಲಾ 4 ಮಿ.ಮೀ. ಮಳೆಯಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ 17 ರಿಂದ 18 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ, 32 ರಿಂದ 34 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗುವ ಸಾಧ್ಯತೆ ಇದೆ.

ತಾಲೂಕುವಾರು ಮಳೆ ವಿವರ:

ಎಚ್.ಡಿ. ಕೋಟೆ ತಾಲೂಕಿನಲ್ಲಿ ಜೂ.29 ಮತ್ತು 30 ರಂದು ತಲಾ 0.1 ಮಿ.ಮೀ., ಜು.1 ರಂದು 1 ಮಿ.ಮೀ., ಜು.3 ರಂದು 0.4 ಮಿ.ಮೀ. ಮಳೆ ಸುರಿಯುವ ಸಾಧ್ಯತೆ ಇದ್ದು, ಜು.2 ರಂದು ಮಳೆ ಸುರಿಯುವ ಸಾಧ್ಯತೆ ಇಲ್ಲ. ಅದೇ ರೀತಿ ಹುಣಸೂರು ತಾಲೂಕಿನಲ್ಲಿ ಜೂ.29 ರಂದು 0.2 ಮಿ.ಮೀ., 30 ರಂದು 1 ಮಿ.ಮೀ., ಜು.1 ರಂದು 5.2 ಮಿ.ಮೀ., ಜು.3 ರಂದು 1.1 ಮಿ.ಮೀ. ಮಳೆಯಾಗುವ ಸಾಧ್ಯತೆ ಇದ್ದು, ಜು.2 ರಂದು ಮಳೆಯ ಮುನ್ಸೂಚನೆ ಇಲ್ಲ. ಕೆ.ಆರ್. ನಗರ ತಾಲೂಕಿನಲ್ಲಿ ಜೂ.29 ರಂದು 0.7 ಮಿ.ಮೀ., 30 ರಂದು 3.5 ಮಿ.ಮೀ., ಜು.1 ರಂದು 8.2 ಮಿ.ಮೀ., 2 ರಂದು 0.2 ಮಿ.ಮೀ., 3 ರಂದು 1 ಮಿ.ಮೀ. ಮಳೆ ಸುರಿಯುವ ಸಾಧ್ಯತೆ ಇದೆ.

ಮೈಸೂರು ತಾಲೂಕಿನಲ್ಲಿ ಜೂ.30 ರಂದು 2.4 ಮಿ.ಮೀ., ಜು.1 ರಂದು 5.9 ಮಿ.ಮೀ., 2 ರಂದು 4.5 ಮಿ.ಮೀ., 3 ರಂದು 3.4 ಮಿ.ಮೀ. ಮಳೆಯಾಗುವ ಸಾಧ್ಯತೆ ಇದ್ದು, ಜೂ.29 ರಂದು ಮಳೆಯ ಮುನ್ಸೂಚನೆ ಇಲ್ಲ. ನಂಜನಗೂಡು ತಾಲೂಕಿನಲ್ಲಿ ಜು.1 ರಂದು 1.7 ಮಿ.ಮೀ,. 2 ರಂದು 1.5 ಮಿ.ಮೀ., 3 ರಂದು 6.3 ಮಿ.ಮೀ. ಮಳೆ ಸುರಿಯುವ ಸಾಧ್ಯತ ಇದ್ದು, ಜೂ.29 ಮತ್ತು 30 ರಂದು ಮಳೆಯ ಮುನ್ಸೂಚನೆ ಇಲ್ಲ. ಪಿರಿಯಾಪಟ್ಟಣ ತಾಲೂಕಿನಲ್ಲಿ ಜೂ.29 ರಂದು 0.5 ಮಿ.ಮೀ., 30 ರಂದು 0.6 ಮಿ.ಮೀ., 1 ರಂದು 4.1 ಮಿ.ಮೀ., 3 ರಂದು 2.3 ಮಿ.ಮೀ. ಮಳೆ ಸುರಿಯುವ ಸಾಧ್ಯತೆ ಇದ್ದು, ಜು.2 ರಂದು ಮಳೆಯ ಮುನ್ಸೂಚನೆ ಇಲ್ಲ. ತಿ.ನರಸೀಪುರ ತಾಲೂಕಿನಲ್ಲಿ ಜೂ.29 ರಿಂದ ಜು.1ರವರೆಗೆ ಹಾಗೂ ಜು.3 ರಂದು ಮಳೆ ಸುರಿಯುವ ಮುನ್ಸೂಚನೆ ಇಲ್ಲ. ಜು.2 ರಂದು 1.5 ಮಿ.ಮೀ. ಮಳೆಯಾಗುವ ಸಾಧ್ಯತೆ ಇದೆ.

3.90 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ

ಕಳೆದ ವರ್ಷ ಭೀಕರ ಬರಗಾಲ ಹಿನ್ನೆಲೆಯಲ್ಲಿ ರೈತಾಪಿ ವರ್ಗದವರಿಗೆ ಕೃಷಿ ಚಟುವಟಿಕೆ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಕಳೆದ ವರ್ಷ ಒಟ್ಟು 3.90 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳುವ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ, ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ 56,985 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಕೃಷಿ ಚಟುವಟಿಕೆ ಕೈಗೊಳ್ಳಲಾಗಿತ್ತು. ಆದರೆ, ಈ ಬಾರಿ ಪೂರ್ವ ಮುಂಗಾರು ಉತ್ತಮವಾಗಿ ಸುರಿದ ಹಿನ್ನೆಲೆಯಲ್ಲಿ ಹಾಗೂ ಉತ್ತಮ ಮುಂಗಾರು ಮಳೆ ಸುರಿಯುವ ನಿರೀಕ್ಷೆಯೊಂದಿಗೆ ರೈತರು ಕೃಷಿ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಬಾರಿಯೂ ಸಹ 3.90 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳುವ ಗುರಿ ಹೊಂದಲಾಗಿದ್ದು, ಈ ಪೈಕಿ ಈಗಾಗಲೇ ಅರ್ಧಕ್ಕಿಂತ ಹೆಚ್ಚು ಭಾಗದಲ್ಲಿ ಕೃಷಿ ಚಟುವಟಿಕೆ ಪ್ರಾರಂಭಿಸಲಾಗಿದೆ.

ಕಬಿನಿ ಒಳ ಹರಿವು ಹೆಚ್ಚಳ

ವಯನಾಡು ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕಬಿನಿ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಮಳೆಯ ಪ್ರಮಾಣ ಇದೇ ರೀತಿಯಲ್ಲಿ ಮುಂದುವರೆದರೆ ಕಬಿನಿ ಜಲಾಶಯ ಬಹುಬೇಗನೆ ಭರ್ತಿಯಾಗುವ ನಿರೀಕ್ಷೆ ಇದೆ. ಒಂದೇ ದಿನದಲ್ಲಿ ಕಬಿನಿ ಜಲಾಶಯದಲ್ಲಿ ಮೂರು ಅಡಿ ನೀರು ಹೆಚ್ಚಳವಾಗಿದೆ. ಗರಿಷ್ಠ 2284 ಅಡಿಗಳಷ್ಟು ನೀರಿನ ಸಂಗ್ರಹಣ ಸಾಮರ್ಥ್ಯವಿರುವ ಜಲಾಶಯದಲ್ಲಿ ಜೂ.27 ರಂದು 2269.22 ಅಡಿಗಳಷ್ಟು ನೀರು ಸಂಗ್ರಹವಾಗಿತ್ತು. ಜೂ.28 ರಂದು 2272.51 ಅಡಿಗಳಷ್ಟು ಏರಿಕೆ ಕಂಡಿದೆ. ಜಲಾಶಯಕ್ಕೆ ಪ್ರಸ್ತುತ 20,113 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜಲಾಶಯದಿಂದ ನದಿಗೆ 1,000 ಕ್ಯೂಸೆಕ್ ನೀರು ಹರಿಯಬಿಡಲಾಗುತ್ತಿದೆ.