ಬೇಲೂರು: ತಾಲೂಕಿನ ಮುದಿಗೆರೆ ಗ್ರಾಮದಲ್ಲಿ ಒಂಟಿ ಮನೆಯಲ್ಲಿ ವಾಸವಿದ್ದರಿಗೆ ಪಿಸ್ತೂಲ್ ತೋರಿಸಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದು, ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಚಿತಾ ಭೇಟಿನೀಡಿ ಪರಿಶೀಲಿಸಿದ್ದಾರೆ.
ಮುದಿಗೆರೆ ಗ್ರಾಮದ ಸಮೀಪ ರವಿ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಶನಿವಾರ ಸಂಜೆ ಈತನ ಪತ್ನಿ ಶೃತಿ, ಮಕ್ಕಳೊಂದಿಗೆ ಮನೆಯಲ್ಲಿ ಮಲಗಿದ್ದರು, ತಾಯಿ ಚಂದ್ರಮ್ಮ ಬಾಗಿಲ ಬಳಿ ಕುಳಿತ್ತಿದ್ದಾಗ ಇಬ್ಬರು ಅಪರಿಚಿತರು ನಿಮ್ಮ ಮಗ ಎಲ್ಲಿ ಎಂದು ಕೇಳುತ್ತಲೇ ಮನೆಯೊಳಗೆ ಬಂದು ಪಿಸ್ತೂಲು ತೋರಿಸಿ ಎಲ್ಲರನ್ನು ಭಯಪಡಿಸಿದ್ದಾರೆ. ರವಿ ತಾಯಿಯ ಕಿವಿಯಲ್ಲಿದ್ದ 5 ಗ್ರಾಂ ಚಿನ್ನದ ಓಲೆಗಳನ್ನು ಬಿಚ್ಚಿಸಿಕೊಂಡಿದ್ದಾರೆ. ನಂತರ ಮನೆಯ ಹಾಲ್‌ನಲ್ಲಿ ಮಲಗಿದ್ದ ಪತ್ನಿ ಶೃತಿಯನ್ನು ಎಬ್ಬಿಸಿ ಅವರಿಗೂ ಪಿಸ್ತೂಲು ತೋರಿಸಿ, 4 ಗ್ರಾಂ ಚಿನ್ನದ ತಾಳಿ, 1 ಗ್ರಾಂ ತೂಕದ ಎರಡು ಚಿನ್ನದ ಗುಂಡು ಮತ್ತು ಕಿವಿಯಲ್ಲಿದ್ದ 4 ಗ್ರಾಂ ತೂಕದ ಓಲೆಗಳನ್ನು ಬಿಚ್ಚಿಸಿಕೊಂಡು, ಶೃತಿ ಅವರ ಕೈಲಿದ್ದ ಮೊಬೈಲ್‌ನ್ನು ಕಿತ್ತುಕೊಂಡಿದ್ದಾರೆ.
ಬಳಿಕ ಬೀರುವಿನ ಬಾಗಿಲು ತೆರೆಯಲು ಹೇಳಿದ್ದಾರೆ. ಆದರೆ ಬೀರುವಿನ ಕೀ ಪತಿಯ ಹತ್ತಿರ ಇದೆ ಎಂದು ಹೇಳಿದಾಗ ಮನೆಯಲ್ಲಿದ್ದ ಎಲ್ಲರನ್ನೂ ಒಂದೇ ರೂಮಿನಲ್ಲಿ ಕೂಡಿ ಹಾಕಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಚಂದ್ರಮ್ಮ ನಮ್ಮನ್ನು ಕೂಡಿ ಹಾಕಬೇಡಿ ಎಂದಾಗ ಒಬ್ಬಾತ ಪಿಸ್ತೂಲಿನಿಂದ ಮನೆಯ ಮೇಲ್ಭಾಗಕ್ಕೆ ಗುಂಡು ಹಾರಿಸಿ ಎಲ್ಲರನ್ನು ರೂಮಿಗೆ ಕೂಡಿಹಾಕಿ ಬಾಗಿಲು ಹಾಕಿಕೊಂಡು ತೆರಳುತಿದ್ದಂತೆ, ಮನೆಯಲ್ಲಿದ್ದವರು ಜೋರಾಗಿ ಕೂಗಿಕೊಂಡಿದ್ದಾರೆ. ಇದನ್ನು ಕೇಳಿ ಸಮೀಪದಲ್ಲೇ ಕೆಲಸ ಮಾಡುತಿದ್ದ ರವಿ, ಓಡಿ ಬಂದಾಗ ಕಳ್ಳರು ಗಾಳಿಯಲ್ಲಿ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ವಿಷಯ ತಿಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಚಿತಾ, ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಘಟನೆ ಸಂಬಂಧ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.