ಮೈಸೂರು ದಸರಾದಲ್ಲಿ ಪಾಲ್ಗೊಂಡಿದ್ದ ಭಾರತೀಯ ಸೇನೆಯ ಸ್ತಬ್ಧಚಿತ್ರ 
ಜಿಲ್ಲೆ

ಜಂಬೂಸವಾರಿಯಲ್ಲಿ ಸೇನಾ ಪರಾಕ್ರಮದ ಅನಾವರಣ

ಸದೇಶ್ ಕಾರ್ಮಾಡ್ ಮೈಸೂರು

ನಾಡಹಬ್ಬ ದಸರಾ ಪ್ರಯುಕ್ತ ಬುಧವಾರ ಆಯೋಜಿಸಿದ್ದ ಜಂಬೂಸವಾರಿ ಮೆರವಣಿಗೆಯಲ್ಲಿ ಮೊದಲ ಬಾರಿಗೆ ಭಾರತೀಯ ಸೇನೆಯ ಪರಾಕ್ರಮ, ಆಧುನಿಕ ರಕ್ಷಣಾ ತಂತ್ರಜ್ಞಾನ ಮತ್ತು ಸ್ವದೇಶಿ ಶಸ್ತ್ರಾಸ್ತ್ರಗಳ ಸಾಮರ್ಥ್ಯ ಅನಾವರಣಗೊಂಡಿತು.

ಸಾಂಸ್ಕೃತಿಕ ವೈಭವ, ಜನಪದ ಕಲೆಗಳು ಹಾಗೂ ನಾಡಿನ ಪರಂಪರೆಯ ನಡುವೆ ಸೇನೆಯ ಸ್ತಬ್ಧಚಿತ್ರಗಳು ದೇಶಭಕ್ತಿಯ ಕಿಚ್ಚು ಹೊತ್ತಿಸಿ, ಪ್ರೇಕ್ಷಕರಲ್ಲಿ ಹೆಮ್ಮೆಯ ಭಾವ ಮೂಡಿಸಿದವು. ಯೋಧರ ಶೌರ್ಯ, ಅತ್ಯಾಧುನಿಕ ಸಮರ ಸನ್ನದ್ಧತೆ ಮತ್ತು ಆತ್ಮನಿರ್ಭರ ಭಾರತದ ಸಂಕಲ್ಪವನ್ನು ಸಾರಿದ ಈ ಪ್ರದರ್ಶನ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿ ಗಮನ ಸೆಳೆಯಿತು.

ದೇಶದ ಗಡಿಗಳನ್ನು ಕಾಯುವ ಯೋಧರ ತ್ಯಾಗ, ದೇಶೀಯ ತಂತ್ರಜ್ಞಾನದಲ್ಲಿ ಭಾರತ ಸಾಧಿಸಿರುವ ಪ್ರಗತಿ ಹಾಗೂ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ಮಹತ್ವಾಕಾಂಕ್ಷೆಯನ್ನು ಸ್ತಬ್ಧಚಿತ್ರಗಳು ಸಾರಿದವು. ಶಸ್ತ್ರಾಸ್ತ್ರಗಳ ಆಧುನೀಕರಣದಿಂದ ಹಿಡಿದು ವೈಮಾನಿಕ ಸಾಮರ್ಥ್ಯ, ನೌಕಾ ಶಕ್ತಿ ಮತ್ತು ಕ್ಷಿಪಣಿ ವ್ಯವಸ್ಥೆಗಳವರೆಗೆ ಭಾರತದ ರಕ್ಷಣಾ ಸಾಮರ್ಥ್ಯದ ವಿವಿಧ ಮಜಲುಗಳು ಜನರ ಕಣ್ಮುಂದೆ ತೆರೆದುಕೊಂಡವು.

ದೇಶದ ರಕ್ಷಣೆಗೆ ಸದಾ ಸನ್ನದ್ಧವಾಗಿರುವ ಸೈನಿಕರ ಸಾಹಸವನ್ನು ಸ್ಮರಿಸುವುದರ ಜತೆಗೆ, ಯುವಜನರಲ್ಲಿ ಸೇನೆಗೆ ಸೇರುವ ಆಸಕ್ತಿ, ಶಿಸ್ತು ಮತ್ತು ರಾಷ್ಟ್ರಸೇವೆಯ ಮನೋಭಾವ ಬೆಳೆಸುವ ಸಂದೇಶವೂ ಈ ಪ್ರದರ್ಶನದಲ್ಲಿತ್ತು. ಆಧುನಿಕ ಭಾರತದ ರಕ್ಷಣಾ ಶಕ್ತಿಯ ಅನಾವರಣ ಜಂಬೂಸವಾರಿ ಮೆರವಣಿಗೆಗೆ ಹೊಸ ಮೆರುಗು ನೀಡಿತು.

ಮೈಸೂರಿನ ಜಂಬೂಸವಾರಿ ನಾಡಿನ ಸಂಸ್ಕೃತಿ, ಪರಂಪರೆ ಮತ್ತು ಜನಪದ ವೈಭವದ ಪ್ರತೀಕ. ಈ ಬಾರಿ ಅದರೊಂದಿಗೆ ಅನಾವರಣಗೊಂಡ ಸೇನಾ ಪರಾಕ್ರಮವು ದೇಶದ ಭದ್ರತೆ ಮತ್ತು ಸ್ವಾವಲಂಬನೆಯ ಸಂಕಲ್ಪಕ್ಕೆ ಹೊಸ ಆಯಾಮ ನೀಡಿತು. ಅರಮನೆಯ ಗತವೈಭವದ ನಡುವೆ ಆಧುನಿಕ ಭಾರತದ ರಕ್ಷಣಾ ಸಾಮರ್ಥ್ಯ ಮೇಳೈಸಿ, ದೇಶದ ಹೆಮ್ಮೆ ಮತ್ತು ಯೋಧರ ತ್ಯಾಗವನ್ನು ಸ್ಮರಿಸುವ ಅಪೂರ್ವ ಕ್ಷಣಗಳಿಗೆ ಸಾಕ್ಷಿಯಾಯಿತು.

ಭಾರತೀಯ ಸೇನೆ

ಯೋಧರ ಸಾಹಸ ಹಾಗೂ ಆಧುನಿಕ ಸಮರ ಸಾಮರ್ಥ್ಯವನ್ನು ಬಿಂಬಿಸಿದ ಸೇನೆಯ ಸ್ತಬ್ಧಚಿತ್ರದಲ್ಲಿ ಸ್ವದೇಶಿ ಎಕೆ-203 ರೈಫಲ್, ಲಂಬವಾಗಿ ಹಾರಾಟ ನಡೆಸಬಲ್ಲ ಡ್ರೋನ್‌ಗಳು, ಸ್ಫೋಟಕ ಡ್ರೋನ್‌ಗಳು ಮತ್ತು ವಿದ್ಯುನ್ಮಾನ ಯುದ್ಧ ವ್ಯವಸ್ಥೆಗಳು ಪ್ರಮುಖ ಆಕರ್ಷಣೆಗಳಾಗಿದ್ದವು. ತಾಂತ್ರಿಕ ಸವಾಲುಗಳ ನಡುವೆಯೂ ನಿಖರವಾಗಿ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹಾಗೂ ಸ್ವದೇಶಿ ರಕ್ಷಣಾ ಉತ್ಪಾದನೆಯ ಮಹತ್ವವನ್ನು ಇದು ಸಾರಿತು. ಪ್ರತಿಯೊಂದು ತಾಂತ್ರಿಕ ಸಾಧನೆಯ ಹಿಂದಿರುವ ಯೋಧರ ಕರ್ತವ್ಯನಿಷ್ಠೆ ಮತ್ತು ತ್ಯಾಗಕ್ಕೆ ಗೌರವ ಸಲ್ಲಿಸಿತು.

ಭಾರತೀಯ ನೌಕಾಪಡೆ

ಸ್ವದೇಶಿ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್, ಯುದ್ಧನೌಕೆಗಳು, ಜಲಾಂತರ್ಗಾಮಿಗಳು ಹಾಗೂ ನೌಕಾ ವೈಮಾನಿಕ ಕಾರ್ಯಾಚರಣೆಗಳನ್ನು ಪ್ರದರ್ಶಿಸಲಾಯಿತು. ಸಮುದ್ರ ಗಡಿಗಳ ರಕ್ಷಣೆ, ಇಂಧನ ಸಾಗಣೆಯ ಸುರಕ್ಷತೆ ಮತ್ತು ದೇಶೀಯ ತಂತ್ರಜ್ಞಾನದ ಮೂಲಕ ನೌಕಾ ಸಾಮರ್ಥ್ಯ ಹೆಚ್ಚಿಸಿಕೊಳ್ಳುತ್ತಿರುವ ಭಾರತದ ಪ್ರಗತಿಯನ್ನು ಸ್ತಬ್ಧಚಿತ್ರ ಪ್ರತಿಬಿಂಬಿಸಿತು.

ಭಾರತೀಯ ವಾಯುಪಡೆ

ಅತ್ಯಾಧುನಿಕ ಯುದ್ಧವಿಮಾನಗಳ ಹಾರಾಟದ ಅನುಕರಣ ವ್ಯವಸ್ಥೆ ಹಾಗೂ ವಾಯುಪಡೆಯ ವಿವಿಧ ವೃತ್ತಿ ಅವಕಾಶಗಳ ಪರಿಚಯ ಗಮನ ಸೆಳೆಯಿತು. ಹಾರಾಟ, ತಾಂತ್ರಿಕ ಮತ್ತು ಭೂಸೇವಾ ವಿಭಾಗಗಳ ಮೂಲಕ ಯುವಜನರಿಗೆ ರಾಷ್ಟ್ರಸೇವೆಯ ಅವಕಾಶಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶ ಈ ಪ್ರದರ್ಶನದಲ್ಲಿತ್ತು.

ತುಳುನಾಡು

ಭಾಷೆ ಮತ್ತು ಸಂಸ್ಕೃತಿಯ ಅನನ್ಯತೆ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ತುಳು ಭಾಷೆ, ಜನಪದ ಕಲೆಗಳು ಹಾಗೂ ಧಾರ್ಮಿಕ ಸಂಪ್ರದಾಯಗಳನ್ನು ಬಿಂಬಿಸಲಾಯಿತು. ತುಳು ಭಾಷೆಯ ಸಂರಕ್ಷಣೆ ಮತ್ತು ಬೆಳವಣಿಗೆಯ ಆಶಯಕ್ಕೆ ಸ್ತಬ್ಧಚಿತ್ರ ಮಹತ್ವ ನೀಡಿತು.

ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್)

ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳ ಮೂಲಕ ಭಾರತದ ಸ್ವದೇಶಿ ವೈಮಾನಿಕ ಹಾಗೂ ರಕ್ಷಣಾ ತಂತ್ರಜ್ಞಾನದ ಪ್ರಗತಿಯನ್ನು ಪ್ರದರ್ಶಿಸಲಾಯಿತು. ರಕ್ಷಣೆ, ಕಣ್ಗಾವಲು, ಸಾರಿಗೆ ಮತ್ತು ವಿಪತ್ತು ನಿರ್ವಹಣೆಯಲ್ಲಿ ವೈಮಾನಿಕ ಸಾಮರ್ಥ್ಯದ ಮಹತ್ವವನ್ನು ಸ್ತಬ್ಧಚಿತ್ರ ಸಾರಿತು.

ಬಿಇಎಂಎಲ್

ಎಂಟು ಚಕ್ರಗಳ ಭಾರೀ ವಾಹನದ ಮೇಲೆ ಅಳವಡಿಸಿದ ಪಿನಾಕಾ ಬಹು ನಳಿಕೆ ರಾಕೆಟ್ ಉಡಾವಣಾ ವ್ಯವಸ್ಥೆಯು ಭಾರತದ ಸ್ವದೇಶಿ ರಕ್ಷಣಾ ಎಂಜಿನಿಯರಿಂಗ್ ಸಾಮರ್ಥ್ಯವನ್ನು ತೋರಿಸಿತು. ಕಠಿಣ ಭೂಪ್ರದೇಶಗಳಲ್ಲಿಯೂ ಚಲಿಸುವ ಸಾಮರ್ಥ್ಯ ಹೊಂದಿರುವ ಈ ವಾಹನವು ಸೇನೆಯ ಕಾರ್ಯಾಚರಣೆಯ ಬಲವನ್ನು ಪ್ರತಿಬಿಂಬಿಸಿತು.

ಸಿಎಸ್‌ಐಆರ್ ರಾಷ್ಟ್ರೀಯ ವೈಮಾನಿಕ ಪ್ರಯೋಗಶಾಲೆಗಳು

ಸ್ವದೇಶಿ ನಾಗರಿಕ ವಿಮಾನಗಳು, ವೈಜ್ಞಾನಿಕ ಸಂಶೋಧನೆ ಮತ್ತು ಪರೀಕ್ಷಾ ಸೌಲಭ್ಯಗಳ ಮೂಲಕ ಭಾರತದ ವೈಮಾನಿಕ ತಂತ್ರಜ್ಞಾನದಲ್ಲಿನ ಸಾಧನೆಗಳನ್ನು ಪರಿಚಯಿಸಲಾಯಿತು. ಹಸಿರು ವಿಜ್ಞಾನ ಮತ್ತು ನಾವೀನ್ಯತೆಯ ಮೂಲಕ ಭವಿಷ್ಯದ ಅಭಿವೃದ್ಧಿಗೆ ದಾರಿ ಮಾಡಿಕೊಡುವ ಸಂದೇಶ ಮೂಡಿಬಂತು.

ಭಾರತೀಯ ರೈಲ್ವೆ

ಉಗಿ, ಡೀಸೆಲ್ ಮತ್ತು ವಿದ್ಯುತ್ ಎಂಜಿನ್‌ಗಳ ವಿಕಾಸದ ಜತೆಗೆ ಹೈಡ್ರೋಜನ್ ರೈಲಿನ ಪರಿಕಲ್ಪನೆಯನ್ನು ಪ್ರದರ್ಶಿಸಲಾಯಿತು. ಮೈಸೂರು ರೈಲು ನಿಲ್ದಾಣದ ಪುನರಾಭಿವೃದ್ಧಿ ಹಾಗೂ ಪ್ರಯಾಣಿಕರಿಗೆ ವಿಶ್ವದರ್ಜೆಯ ಸೌಲಭ್ಯ ಕಲ್ಪಿಸುವ ಯೋಜನೆಗಳೂ ಸ್ತಬ್ಧಚಿತ್ರದಲ್ಲಿ ಪ್ರತಿಬಿಂಬಿಸಿದವು

ಕರ್ನಾಟಕ ಪ್ರವಾಸೋದ್ಯಮ ಇಲಾಖೆ

ಹಚ್ಚಹಸಿರಿನ ಕಾಡುಗಳು, ಜಲಪಾತಗಳು, ಕಾಫಿ ತೋಟಗಳು ಮತ್ತು ಕಡಲತೀರಗಳ ಸೊಬಗಿನೊಂದಿಗೆ ಯಕ್ಷಗಾನ, ಕಂಬಳ ಹಾಗೂ ಮೀನುಗಾರಿಕೆ ಸಂಪ್ರದಾಯಗಳನ್ನು ಪರಿಚಯಿಸಲಾಯಿತು. ಪ್ರಕೃತಿ ಮತ್ತು ಸಂಸ್ಕೃತಿಯ ಸಮ್ಮಿಲನ ಕರ್ನಾಟಕದ ವೈವಿಧ್ಯತೆಯನ್ನು ಸಾರಿತು.

ಎಚ್‌ಎಂಟಿ

ಒಂದು ಕಾಲದಲ್ಲಿ ಜನರ ಮನೆಮಾತಾಗಿದ್ದ ಎಚ್‌ಎಂಟಿ ಇದೀಗ ಮತ್ತೆ ಯುವಜನರನ್ನು ಸೆಳೆಯಲು ಪ್ರಾರಂಭಿಸಿದೆ. ಸಂಸ್ಥೆ ಸಾಗಿದ ಬಂದ ಹಾದಿ ಹಾಗೂ ಸಾಧನೆಯ ಮುನ್ನೋಟವನ್ನು ಎಚ್‌ಎಂಟಿ ಸ್ತಬ್ಧಚಿತ್ರ ತೆರೆದಿಟ್ಟಿತು. ಯಂತ್ರೋಪಕರಣಗಳು, ನಿಖರ ಎಂಜಿನಿಯರಿಂಗ್ ಮತ್ತು ಜನಪ್ರಿಯ ಎಚ್‌ಎಂಟಿ ಕೈಗಡಿಯಾರಗಳ ಮೂಲಕ ಸಂಸ್ಥೆಯ ಕೈಗಾರಿಕಾ ಪರಂಪರೆಯನ್ನು ಸ್ಮರಿಸಲಾಯಿತು.

ತಮಿಳುನಾಡು

ತಮಿಳುನಾಡಿನ ಭವ್ಯವಾಸ್ತುಶಿಲ್ಪ ಪರಂಪರೆ ಮತ್ತು ಜೀವಂತ ಜನಸಂಸ್ಕೃತಿಯ ಸಂಗಮವನ್ನು ಈ ಸ್ತಬ್ಧಚಿತ್ರ ಮನೊಜ್ಞವಾಗಿ ಅನಾವರಣಗೊಳಿಸಿತು. ಮಾಮಲ್ಲಪುರಂನ ತೀರ ದೇವಾಲಯದ ಪ್ರತಿರೂಪ ಮತ್ತು ಜಲ್ಲಿಕಟ್ಟು ದೃಶ್ಯಗಳು ತಮಿಳುನಾಡಿನ ವಾಸ್ತುಶಿಲ್ಪ, ಶಿಲ್ಪಕಲೆ ಹಾಗೂ ಸಾಹಸಪರ ಸಂಸ್ಕೃತಿಯನ್ನು ಅನಾವರಣಗೊಳಿಸಿದವು.

ಕೇರಳ

ಕೇರಳದ ಸ್ತಬ್ಧಚಿತ್ರ ಅಲ್ಲಿನ ಜೀವಂತ ಕಲೆಗಳು, ವೈವಿಧ್ಯಮಯ ಸಮುದಾಯಗಳು ಮತ್ತು ನೈಸರ್ಗಿಕ ಸೌಂದರ್ಯವನ್ನು ಒಂದೇ ದೃಶ್ಯದಲ್ಲಿ ಅನಾವರಣಗೊಳಿಸಿತು. ತೆಯ್ಯಂ, ಕಥಕಳಿ, ಚೆಂಡೆ ಮತ್ತು ಹಿನ್ನೀರಿನ ದೋಣಿ ಸಂಸ್ಕೃತಿಯ ಮೂಲಕ ಕೇರಳದ ಕಲೆ, ಜನಜೀವನ ಮತ್ತು ಪ್ರಕೃತಿ ಸೌಂದರ್ಯವನ್ನು ಬಿಂಬಿಸಲಾಯಿತು.

ಇತಿಹಾಸದ ಮೊಟ್ಟಮೊದಲ ದಸರಾ

ಹಂಪಿಯ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ವೈಭವದಿಂದ ನಡೆದ ದಸರಾ ಉತ್ಸವದ ನೆನಪನ್ನು ಸ್ತಬ್ಧಚಿತ್ರ ಮರುಕಳಿಸಿತು. ಮಹಾನವಮಿ ದಿಬ್ಬ, ರಾಜಮೆರವಣಿಗೆಗಳು ಮತ್ತು ವಿದೇಶಿ ಪ್ರವಾಸಿಗರ ಐತಿಹಾಸಿಕ ದಾಖಲೆಗಳ ಮೂಲಕ ದಸರೆಯ ಪ್ರಾಚೀನ ಪರಂಪರೆಯನ್ನು ಪರಿಚಯಿಸಲಾಯಿತು.

ಗಜವೀರ ಅರ್ಜುನನಿಗೆ ಭಾವಪೂರ್ಣ ನಮನ

ದಸರಾ ಜಂಬೂಸವಾರಿಯಲ್ಲಿ ಹಲವು ವರ್ಷಗಳ ಕಾಲ ಪಾಲ್ಗೊಂಡು ಜನರ ಪ್ರೀತಿ ಗಳಿಸಿದ್ದ ಅರ್ಜುನ ಆನೆಯ ನೆನಪು ಹಾಸನದ ಸ್ತಬ್ಧಚಿತ್ರದಲ್ಲಿ ಪ್ರಮುಖವಾಗಿ ಮೂಡಿಬಂತು. ದಸರೆಯೊಂದಿಗೆ ಭಾವನಾತ್ಮಕ ನಂಟು ಬೆಸೆದುಕೊಂಡಿದ್ದ ಈ ಗಜವೀರನ ಸ್ಮರಣೆ ಪ್ರಾಣಿ ಪ್ರೇಮಿಗಳು ಹಾಗೂ ದಸರಾ ಅಭಿಮಾನಿಗಳ ಮನದಲ್ಲಿ ಹಳೆಯ ನೆನಪುಗಳನ್ನು ಮರುಕಳಿಸುವಂತಿತ್ತು.

ತುಳುನಾಡು

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ತುಳು ಭಾಷೆ, ಜನಪದ ಕಲೆಗಳು ಹಾಗೂ ಧಾರ್ಮಿಕ ಸಂಪ್ರದಾಯಗಳನ್ನು ಬಿಂಬಿಸಲಾ ಯಿತು. ತುಳು ಭಾಷೆಯ ಸಂರಕ್ಷಣೆ ಮತ್ತು ಬೆಳವಣಿಗೆಯ ಆಶಯಕ್ಕೆ ಸ್ತಬ್ಧಚಿತ್ರ ಮಹತ್ವ ನೀಡಿತು. ಇತ್ತೀಚೆಗೆ ರಾಜ್ಯ ಸರ್ಕಾರ ತುಳು ಭಾಷೆಗೆ ರಾಜ್ಯದ 2ನೇ ಸ್ಥಾನಮಾನ ನೀಡಿರುವ ವಿಚಾರ ಸ್ತಬ್ಧಚಿತ್ರದ ಮೂಲಕ ಗಮನ ಸೆಳೆಯಲಾಯಿತು.

------------