ವಿಜಯವಾಣಿ ಸುದ್ದಿಜಾಲ ಧಾರವಾಡ
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಕಳಪೆ ಸಾಧನೆ ತೋರಿದ ಜಿಲ್ಲೆಯ 106 ಶಾಲೆಗಳಿಗೆ ಶೋಕಾಸ್ ನೋಟಿಸ್ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ ಪಾಟೀಲ ಆದೇಶಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 50ಕ್ಕಿಂತ ಕಡಿಮೆ ಫಲಿತಾಂಶ ತೋರಿದ ಶಾಲೆಗಳ ಮುಖ್ಯಾಧ್ಯಾಪಕರ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯ 2 ಅನುದಾನಿತ, 4 ಖಾಸಗಿ ಶಾಲೆಗಳು ಶೂನ್ಯ ಫಲಿತಾಂಶ ಮಾಡಿವೆ. ಶಾಲೆಯ ಒಂದು ಮಗುವನ್ನು ಪಾಸ್ ಮಾಡಿಸುವಷ್ಟು ಕಲಿಸದ ಶಿಕ್ಷಕರಿಗೆ, ಮುಖ್ಯಸ್ಥರಿಗೆ ನಾಚಿಕೆ ಆಗಬೇಕು. ಶಿಕ್ಷಕ ವೃತ್ತಿ ನಿಮಗೆ ಆತ್ಮತೃಪ್ತಿ ನೀಡಿದೆಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಆಕ್ರೋಶ ಹೊರಹಾಕಿದರು.
ಶೂನ್ಯ ಸಾಧನೆ ಮಾಡಿದ ಶಾಲೆಗಳ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಅಲ್ಲಿನ ಮಕ್ಕಳನ್ನು ಹತ್ತಿರದ ಶಾಲೆಗಳಿಗೆ ವರ್ಗಾಯಿಸಲು ಕ್ರಮ ವಹಿಸಬೇಕು. ನಿಷ್ಕಾಳಜಿ ತೋರಿದರೆ ಡಿಡಿಪಿಐ ಮತ್ತು ಬಿಇಒಗಳ ವಿರುದ್ಧ ಕ್ರಮಕ್ಕಾಗಿ ಇಲಾಖೆಗೆ ಶಿಪಾರಸ್ಸು ಮಾಡಲಾಗುತ್ತದೆ ಎಂದು ಪಾಟೀಲ ಎಚ್ಚರಿಕೆ ನೀಡಿದರು.
ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್.ಎಸ್. ಕೆಳದಿಮಠ, ಸಹಾಯಕ ಯೋಜನಾ ಸಮನ್ವಯ ಅಧಿಕಾರಿ ಡಾ. ರೇಣುಕಾ ಅಮಲಝರಿ, ಡಯಟ್ ಉಪ ಪ್ರಾಚಾರ್ಯ ಜೆ.ಜಿ. ಸೈಯದ್, ಡಯಟ್ ಉಪನ್ಯಾಸಕರಾದ ಎ.ಎ. ಖಾಜಿ, ಅರ್ಜುನ ಕಾಂಬೋಗಿ, ಡಿವೈಪಿಸಿ ಎಸ್.ಎಂ. ಹುಡೇದಮನಿ, ಕ್ಷೇತ್ರ ಶಿಕ್ಷಣಾಽಕಾರಿಗಳು, ಪ್ರೌಢಶಾಲೆಗಳ ಮುಖ್ಯಾಧ್ಯಾಪಕರು ಉಪಸ್ಥಿತರಿದ್ದರು.