ಶ್ರೀನಿವಾಸಪುರ: ಎಲ್ಲ ರೀತಿಯ ಸೌಲಭ್ಯಗಳನ್ನು ಒಳಗೊಂಡಂತೆ ಸ್ವಚ್ಛತೆ, ನಿರ್ವಹಣೆ, ರೋಗಿಗಳ ಸೇವೆ ನೀಡುವುದು ಸೇರಿ ಹಲವು ವಿಭಾಗಗಳಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ವಿವಿಧ ಪ್ರಶಸ್ತಿಗಳಿಗೆ ಭಾಜನವಾಗಿದ್ದ ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಯಲ್ಲೀಗ ಪ್ರಸೂತಿ ತಜ್ಞ ಹಾಗೂ ಇ.ಎನ್.ಟಿ.ತಜ್ಞರು, ಶುಶ್ರೂಷಿಕಿಯರು ಸೇರಿದಂತೆ ಡಿ.ಗ್ರೂಪ್ ನೌಕರರ ಕೊರತೆ ಉಂಟಾಗಿದೆ.
ಶ್ರೀನಿವಾಸಪುರ ತಾಲೂಕು ಗಡಿಭಾಗದಲ್ಲಿದ್ದರೂ ಸರ್ಕಾರಿ ಆಸ್ಪತ್ರೆ ಕಳೆದ 10 ವರ್ಷಗಳಿಂದ ರೋಗಿಗಳಿಗೆ ಉತ್ತಮ ಸೇವೆ ನೀಡುತ್ತಿತ್ತು. ಆಸ್ಪತ್ರೆಯಲ್ಲಿ ಇತ್ತೀಚೆಗೆ ಪ್ರಸೂತಿ ತಜ್ಞರ ಮತ್ತು ಇ.ಎನ್.ಟಿ.ತಜ್ಞ ವೈದ್ಯರು ಇಲ್ಲದೇ ಇರುವುದರಿಂದ ಗ್ರಾಮೀಣ ಭಾಗದ ಗರ್ಭಿಣಿಯರಿಗೆ ಸೇವೆ ಇಲ್ಲದಂತಾಗಿದೆ.
100 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಯಾಗಿದ್ದು, ತಾಲೂಕು ಕೇಂದ್ರದಿಂದ 50 ರಿಂದ 60 ಕಿ.ಮೀ. ದೂರದ ಗ್ರಾಮಗಳಿಂದ ಗರ್ಭಿಣಿಯರು ಹೆರಿಗೆಗಾಗಿ ತಾಲೂಕು ಕೇಂದ್ರ ಆಸ್ಪತ್ರೆಗೆ ಬರಬೇಕಾಗುತ್ತದೆ. ಸ್ಥಳಿಯ ಪಿ.ಎಚ್.ಸಿ.ಕೇಂದ್ರಗಳಲ್ಲಿ ಸಾಮಾನ್ಯ ಹೆರಿಗೆಗಳನ್ನು ಮಾಡಿಸಬಹುದು. ಆಪರೇಷನ್ ಮಾಡಿ ಮಕ್ಕಳನ್ನು ಹೊರ ತೆಗೆಯಬೇಕಾದರೆ ತಾಲೂಕು ಕೇಂದ್ರಕ್ಕೆ ಬರಬೇಕು. ಈಗ ತಾಲೂಕು ಕೇಂದ್ರದಲ್ಲಿ ನುರಿತ ಗೈನಕಾಲಜಿಸ್ಟ್ ಇಲ್ಲದೇ ಇರುವುದರಿಂದ ಗಡಿಭಾಗದಿಂದ ಸುಮಾರು 80 ಕಿ.ಮೀ ದೂರದ ಜಿಲ್ಲಾಕೇಂದ್ರದ ಆಸ್ಪತ್ರೆಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
100 ಹಾಸಿಗೆಗಳಿಗೆ ತಕ್ಕಂತೆ ಶುಶ್ರೂಷಿಕಿಯರು ಇಲ್ಲ. ಒಟ್ಟು 11 ತಜ್ಞ ವೈದ್ಯರು ಇರಬೇಕು. ಆದರೆ 9 ತಜ್ಞ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. 21 ಶುಶ್ರೂಷಕಿಯರು ಪೈಕಿ 11 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2 ವೈದ್ಯರು, 10 ಶುಶ್ರೂಕಿಯರ ಖಾಲಿ ಹುದ್ದೆ ಇವೆ. ಎನ್ಎಚ್ಎಂ ನಲ್ಲಿ 16 ಶುಶ್ರೂಷಕಿಯರು ಇದ್ದು, ಇವರನ್ನೇ ಬಳಸಿಕೊಳ್ಳಲಾಗುತ್ತಿದೆ.
ಶ್ರೀನಿವಾಸಪುರ ತಾಲೂಕು ಗಡಿಭಾಗವಾಗಿದ್ದು, ಹಿಂದುಳಿದ ಜನಾಂಗದವರು ಹೆಚ್ಚಾಗಿರುವ ಕಾರಣ ಗರ್ಭಿಣಿಯರು ಪ್ರಸವಕ್ಕೆ ಖಾಸಗಿ ಆಸ್ಪತ್ರೆಗೆ ಹೋಗಿ ಹೆಚ್ಚು ಹಣ ಖುರ್ಚು ಮಾಡಿಕೊಳ್ಳುವಂತಾಗಿದೆ. ತುರ್ತಾಗಿ ಸರ್ಕಾರ ಸರ್ಕಾರಿ ಆಸ್ಪತ್ರೆಗೆ ಪ್ರಸೂತಿ ತಜ್ಞರನ್ನು ನೇಮಕ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ತಾಲೂಕಿನ ಒಟ್ಟು 17 ಪಿಎಚ್ಸಿಗಳು ಇದ್ದು, ಎಲ್ಲ ಪಿಎಚ್ಸಿಗಳಲ್ಲಿ ಕಾಯಂ ವೈದ್ಯರು ಇದ್ದಾರೆ. ರಾಯಲ್ಪಾಡು, ಸೋಮಯಾಜಲಪಲ್ಲಿ ಪಿಎಚ್ಸಿಯಲ್ಲಿ ಇತ್ತೀಚಿಗೆ ಕಾಯಂ ವೈದ್ಯರು ನೇಮಕ ಮಾಡಲಾಗಿದೆ. ಈಗಿನ ಜನಸಂಖ್ಯೆಗೆ ತಕ್ಕಂತೆ ಶಶ್ರೂಷಕಿಯರು ಅವಶ್ಯಕತೆ ಇದ್ದು, ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. -ಮಹ್ಮದ್ ಷರೀಫ್, ಟಿಎಚ್ಒ, ಶ್ರೀನಿವಾಸಪುರ ಪ್ರತಿದಿನ ಒಪಿಡಿಗೆ 450 ರೋಗಿಗಳು ಬರುತ್ತಿದ್ದಾರೆ. ಸೋಮವಾರ, ಗುರುವಾರ 600 ಮೇಲ್ಪಟ್ಟು ರೋಗಿಗಳು ಬಂದು ತಪಸಣೆ ಮಾಡಿಸಿಕೊಳ್ಳುತ್ತಾರೆ. ಇಎನ್ಟಿ ಹಾಗು ಗೈನಕಾಲಜಿ ವಿಭಾಗಗಕ್ಕೆ ವೈದ್ಯರು ಬೇಕಾಗಿದ್ದು, ಜನ ಸಂಖ್ಯೆಗೆ ತಕ್ಕಂತೆ ಶಶ್ರೂಷಿಕಿಯರು ಅವಶ್ಯಕತೆ ಇದೆ, ರೋಗಗಳಿಗೆ ತಕ್ಕಂತೆ ಔಷಧ ಲಭ್ಯತೆ ಇದೆ. -ಶ್ರೀನಿವಾಸ್ ಆಡಳಿತ ಅಧಿಕಾರಿ, ಸಾರ್ವಜನಿಕ ಆಸ್ಪತ್ರೆ, ಶ್ರೀನಿವಾಸಪುರ
ಆಸ್ಪತ್ರೆಯಲ್ಲಿ ಸೌಲಭ್ಯಗಳು