ಜಿಲ್ಲೆ

ಲೈನ್‌ಮ್ಯಾನ್‌ಗಳ ಕೊರತೆ: ಎ.ಬಿ.ರಮೇಶ್ ಬಂಡಿಸಿದ್ದೇಗೌಡ ಕಳವಳ

ಮೈಸೂರು: ಲೈನ್‌ಮ್ಯಾನ್‌ಗಳ ಸಂಖ್ಯೆ ಕಡಿಮೆ ಇದ್ದು ಇತ್ತೀಚೆಗೆ ವಿದ್ಯುತ್ ಅವಘಢಗಳೂ ಹೆಚ್ಚಾಗುತ್ತಿವೆ ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷ, ಶಾಸಕ ಎ.ಬಿ.ರಮೇಶ್ ಬಂಡಿಸಿದ್ದೇಗೌಡ ಕಳವಳ ವ್ಯಕ್ತಪಡಿಸಿದರು.


ಕರ್ನಾಟಕ ರಾಜ್ಯದ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ವತಿಯಿಂದ ಕುವೆಂಪುನಗರದ ಸಾಮ್ರಾಟ್ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಗುತ್ತಿಗೆದಾರರು ವಿದ್ಯುತ್ ಅವಘಡಗಳಿಗೆ ತಕ್ಷಣ ಸ್ಪಂದಿಸಿ ಕೆಲಸ ಮಾಡಬೇಕು. ಜತೆಗೆ, ವಿದ್ಯುತ್ ಅನಾಹುತ ತಪ್ಪಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.


ಭಾರತವು ಹೆಚ್ಚು ಮಾನವ ಸಂಪನ್ಮೂಲ ಇರುವ ದೇಶ. ಪ್ರಪಂಚದ ಅತ್ಯಂತ ಉನ್ನತ ಹುದ್ದೆಗಳಲ್ಲಿ ನಮ್ಮ ದೇಶದ ಯುವಕರಿದ್ದಾರೆ. ವಿದ್ಯಾರ್ಥಿಗಳು ಹಿಂದೆ ಗುರು, ಮುಂದೆ ಗುರಿ ಇಟ್ಟು ಕೊಂಡು ಸಾಧನೆ ಮಾಡಬೇಕು ಎಂದರು.


ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಮರೀಗೌಡ ಮಾತನಾಡಿ, ದೇಶದ ಅಭಿವೃದ್ಧಿಗೆ ವಿದ್ಯಾರ್ಥಿಗಳ ಪಾತ್ರ ಮುಖ್ಯವಾಗಿದೆ. ವಿದ್ಯಾಭ್ಯಾಸಕ್ಕೆ ಬೇರೆ ವಿದೇಶಕ್ಕೆ ಹೋಗದೆ ದೇಶಕ್ಕೆ ವಾಪಸ್ ಆಗಿ ದೇಶದ ಋಣ ತೀರಿಸುವ ಕೆಲಸವನ್ನು ಯುವ ಜನತೆ ಮಾಡಬೇಕು. ವಿದ್ಯಾರ್ಥಿಗಳು ದೇಶದ ಸಂಪತ್ತು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪೈಪೋಟಿ ನಡೆಸಬೇಕಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಗುರಿ, ಛಲ ಇಟ್ಟುಕೊಂಡು ಸಾಧನೆ ಮಾಡಿ ಪಾಲಕರಿಗೆ ಮತ್ತು ದೇಶಕ್ಕೆ ಕೀರ್ತಿ ತರಬೇಕು ಎಂದರು.


ವಿದ್ಯುತ್ ಗುತ್ತಿಗೆದಾರರು ಗುಣಮಟ್ಟದ ಕೆಲಸ ಮಾಡಿದರೆ ಸಾರ್ವಜನಿಕರಿಗೆ ನಿರಂತರ ವಿದ್ಯುತ್ ನೀಡಬಹುದು. ಸಂಘಕ್ಕೆ ಸಮುದಾಯ ಭವನ ನಿರ್ಮಿಸಲು ಮುಡಾದಿಂದ ಸಿಎ ನಿವೇಶನಕ್ಕಾಗಿ ಬೇಡಿಕೆ ಮಂಡಿಸಲಾಗಿದ್ದು, ಶೈಕ್ಷಣಿಕ ಚಟುವಟಿಕೆಗಳನ್ನು ನಿರಂತರ ನಡೆಸಿ ಪ್ರೋತ್ಸಾಹಿಸಿದರೆ ನೂರಕ್ಕೆ ನೂರು ಸಿಎ ನಿವೇಶನ ಮಂಜೂರು ಮಾಡಿಸಿಕೊಡುವುದಾಗಿ ಭರವಸೆ ನೀಡಿದರು.

ಸಂಘದ ಗೌರವ ಅಧ್ಯಕ್ಷ ಸಿ.ರಮೆಶ್, ಜಿಲ್ಲಾ ಅಧ್ಯಕ್ಷ ಎಚ್.ಜೆ.ರಾಘವೇಂದ್ರ, ಸೆಸ್ಕ್‌ನ ತಾಂತ್ರಿಕ ನಿರ್ದೇಶಕರಾದ ಮುನಿಗೋಪಾಲ್, ಸುನೀಲ್ ಕುಮಾರ್, ಮುಖಂಡರಾದ ಪೂರ್ಣಚಂದ್ರ ತೇಜಸ್ವಿ, ಎಸ್.ಬಿ.ಅನಿತಾ, ಕೆ.ಎಸ್.ಅಭಿಲಾಷ್, ಸುದರ್ಶನ್, ರವೀಶ್ ಇನ್ನಿತರರಿದ್ದರು.