ಜಿಲ್ಲೆ

ಕೆಜಿಎಫ್ ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ಕೊರತೆ

ಕೆಜಿಎಫ್: ತಾಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಆರೋಗ್ಯ ಇಲಾಖೆ ಜಿಲ್ಲಾ ನೋಡಲ್​ ಅಧಿಕಾರಿ ಸೂರಜ್​ ಅವರು ಭೇಟಿ ನೀಡಿ, ಆಸ್ಪತ್ರೆಯ ಕುಂದು ಕೊರತೆಗಳ ಪರಿಶೀಲನೆ ನಡೆಸಿ, ವಾರ್ಡ್​ಗಳಲ್ಲಿನ ರೋಗಿಗಳ ಆರೋಗ್ಯ ವಿಚಾರಿಸಿದರು. ಆಸ್ಪತ್ರೆಯಲ್ಲಿ ದೊರೆಯುವ ಚಿಕಿತ್ಸೆ ಸೇರಿ ಮೂಲ ಸೌಕರ್ಯಗಳ ಕುರಿತು ರೋಗಿಗಳ ಬಳಿ ಮಾಹಿತಿ ಪಡೆದುಕೊಂಡರು.

ಪ್ರತಿದಿನ ಒಂದು ಸಾವಿರಕ್ಕೂ ಹೆಚ್ಚು ಹೊರ ಮತ್ತು ಒಳ ರೋಗಿಗಳು ಆಸ್ಪತ್ರೆಗೆ ಚಿಕಿತ್ಸೆಗೆ ಬರುತ್ತಿದ್ದು, ಪ್ರಮುಖವಾಗಿ ಹೃದಯ ಸಂಬಂಧಿ ಕಾಯಿಲೆ ಚಿಕಿತ್ಸೆಗೆ ಫಿಜಿಷಿಯನ್​, ಇಬ್ಬರು ವೈದ್ಯರ ಹುದ್ದೆ ಖಾಲಿ ಇದ್ದು, ರೋಗಿಗಳನ್ನು ಚಿಕಿತ್ಸೆಗೆ ಕೋಲಾರದ ಎಸ್​ಎನ್​ಆರ್​ ಆಸ್ಪತ್ರೆಗೆ ಕಳುಹಿಸುವ ಪರಿಸ್ಥತಿ ಇದೆ. ಆದ್ದರಿಂದ ಇಬ್ಬರು ಫಿಜಿಷಿಯನ್​ ವೈದ್ಯರನ್ನು ನೇಮಿಸಬೇಕೆಂದು ಆಸ್ಪತ್ರೆಯ ಉಸ್ತುವಾರಿ ಸಮಿತಿ ಸದಸ್ಯ ಮುತ್ತುಮಾಣಿಕ್ಯಂ ನೋಡಲ್​ ಅಧಿಕಾರಿಗೆ ಮನವಿ ಮಾಡಿದರು.

ಆಸ್ಪತ್ರೆಗೆ ಹೊಸ ಕಟ್ಟಡ, ಮೂಲ ಸೌಕರ್ಯಗಳಿದ್ದು, ರೋಗಿಗಳ ಆರೈಕೆ ಮಾಡಲು ಅಗತ್ಯವಿರುವ ವೈದ್ಯರು, ದಾದಿಯರು, ತಾಂತ್ರಿಕ ಸಿಬ್ಬಂದಿ ಶೇ.40 ಕೊರತೆ ಇದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಸುರೇಶ್​ ಅವರು ಮನವರಿಕೆ ಮಾಡಿಕೊಟ್ಟರು.

ಕೆಜಿಎಫ್​ ಆಸ್ಪತ್ರೆ ಜಿಲ್ಲಾಮಟ್ಟದ ಆಸ್ಪತ್ರೆಯಾಗಿದ್ದು, ಆಸ್ಪತ್ರೆಗೆ ರಾತ್ರಿ ಕಾವಲುಗಾರರು ಇಲ್ಲದೇ ನಿರ್ವಹಣೆ ಮಾಡುವುದು ಕಷ್ಟವಾಗಿದೆ. ರಾತ್ರಿ ಪಾಳಯದಲ್ಲಿ ಕಾರ್ಯನಿರ್ವಹಿಸುವ ವೈದ್ಯರಿಗೆ ಹಾಗೂ ದಾದಿಯರಿಗೆ ಸೂಕ್ತ ರಕ್ಷಣೆ ಇಲ್ಲದೆ ಹಲವು ಕ್ಲಿಷ್ಟಕರ ಸಂದರ್ಭದಲ್ಲಿ ಆಸ್ಪತ್ರೆಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ಪೊಲೀಸ್​ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ಆಸ್ಪತ್ರೆಯ ಸಿಬ್ಬಂದಿ ನೋಡಲ್​ ಅಧಿಕಾರಿ ಮುಂದೆ ಅಳಲು ತೋಡಿಕೊಂಡರು.

ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಅಗತ್ಯವಿರುವ ರಕ್ತ ಶೇಖರಣೆ ಮಾಡಲು ಆಧುನಿಕ ಪರಿಕರಗಳ ಅಗತ್ಯವಿದ್ದು, ಸರ್ಕಾರ ಅನುದಾನ ನೀಡಿ ರಕ್ತ ನಿಧಿ ಕೇಂದ್ರವನ್ನು ಉನ್ನತಿಕರಿಸಲು ನೋಡಲ್​ ಅಧಿಕಾರಿಗಳಿಗೆ ತಿಳಿಸಿದರು. ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ಹೊರಗಡೆಯಿಂದ ಔಷಧ ಖರೀದಿಸಿ ಎಂದು ಹೇಳುವ ಸ್ಥಿತಿ ಎದುರಾಗಿದೆ. ಆಸ್ಪತ್ರೆ ನಿರ್ವಹಣೆ ವೆಚ್ಚ ದಿನಕ್ಕೆ 10 ಸಾವಿರ ರೂ. ನೀಡುತ್ತಿದ್ದು, ಆಸ್ಪತ್ರೆಯ ನಿರ್ವಹಣೆ ವೆಚ್ಚ ಅಧಿಕವಾಗಿರುವುದರಿಂದ ಸರ್ಕಾರದಿಂದ ಹೆಚ್ಚಿನ ಅನುದಾನ ನೀಡುವಂತೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಸುರೇಶ್​ ಮನವಿ ಮಾಡಿದರು.

ಆಸ್ಪತ್ರೆಯ ಆವರಣದಲ್ಲಿ 300 ರೋಗಿಗಳಿಗೆ ಆಗುವಷ್ಟು ಆಕ್ಸಿಜನ್​ ಉತ್ಪಾದನೆ ಮಾಡುವ ಆಧುನಿಕ ಯಂತ್ರಗಳಿದ್ದು, 18 ಹಾಸಿಗೆಗಳ ಐಸಿಯು ಕೊಠಡಿಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಅವಕಾಶವಿದೆ. ಆದರೆ ಐಸಿಯು ಘಟಕ್ಕೆ ಅಗತ್ಯವಿರುವ ಸಿಬ್ಬಂದಿ ಮತ್ತು ವೈದ್ಯರು ಇಲ್ಲದೆ ಐಸಿಯು ಕೊಠಡಿಗಳಿಗೆ ಬೀಗ ಹಾಕಲಾಗಿದೆ. ಕಳೆದ ಒಂದು ವರ್ಷದಿಂದ ಐಸಿಯು ಘಟಕದಲ್ಲಿ ಇರುವ ಪರಿಕರಗಳು ತುಕ್ಕು ಹಿಡಿಯುತ್ತಿವೆ ಎಂದು ಸಾರ್ವಜನಿಕರು ಆಸ್ಪತ್ರೆಯ ಚಿತ್ರಣ ಬಿಡಿಸಿ ಹೇಳಿದರು.

ಸದನಲ್ಲಿ ಶಾಸಕಿಯ ಮನವಿ

ಶಾಸಕಿ ರೂಪಕಲಾ ಅವರು ಸದನದಲ್ಲಿ ಕೆಜಿಎಫ್​ನ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ವೈದ್ಯರು, ಶುಶ್ರೂಷಕರು, ಲ್ಯಾಬ್​ನಲ್ಲಿ ತಾಂತ್ರಿಕ ಸಿಬ್ಬಂದಿ ಕೊರತೆ, ಹೆರಿಗೆ ಆಸ್ಪತ್ರೆಯಲ್ಲಿ ಮೂಲ ಸೌಕರ್ಯಗಳ ಕೊರತೆ, ಚಿನ್ನದ ಗಣಿಗಳಲ್ಲಿ ಕಾರ್ಯನಿರ್ವಹಿಸಿದ್ದ ಕಾರ್ಮಿಕರು ಹೃದಯ ಸಂಬಂಧಿ ಕಾಯಿಲೆಯಿಂದ ತೊಂದರೆ ಅನುಭವಿಸುತ್ತಿರುವ ಬಗ್ಗೆ 5 ವರ್ಷಗಳಿಂದ ಎಳೆ ಎಳೆಯಾಗಿ ಬಿಚ್ಚ್ಚಿಟ್ಟು ಸದನದ ಗಮನ್ಕೆಕ ತಂದರೂ ಸಹ ಆಸ್ಪತ್ರೆಗೆ ಅಗತ್ಯವಿರುವ ಫಿಜಿಷಿಯನ್​ ವೈದ್ಯರು ಬರಲಿಲ್ಲ, ದಾದಿಯರೂ ಬರಲಿಲ್ಲ. ಕೆಜಿಎಫ್​ನಿಂದ ರೋಗಿಗಳನ್ನು ಕೋಲಾರದ ಆಸ್ಪತ್ರಗೆ ರೆಫರ್​ ಮಾಡುವುದು ಇನ್ನೂ ನಿಂತಿಲ್ಲ ಎನ್ನುವುದು ಗಮನಿಸಬೇಕಾದ ವಿಷಯ, ಇನ್ನಾದರೂ ಸರ್ಕಾರ ಕೆಜಿಎಫ್​ ಆಸ್ಪತ್ರೆಯತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.