ಜಿಲ್ಲೆ

ಅಲ್ಪಾವಧಿಯಲ್ಲಿ ಲಾಭ ತರುವ ರೇಷ್ಮೆ ಬೆಳೆ

Mysuru - Desk - Yashavanth Kumar N

ಶ್ರೀರಂಗಪಟ್ಟಣ: ರೇಷ್ಮೆ ಅಲ್ಪಾವಧಿಯಲ್ಲಿ ಬೆಳೆಯಬಹುದಾದ ಆರ್ಥಿಕವಾಗಿ ಲಾಭ ತರುವ ಬೆಳೆಯಾಗಿದ್ದು, ರೈತರು ಸಾಂಪ್ರದಾಯಿಕ ಬೆಳೆಯಿಂದ ಪರಿವರ್ತನೆಗೊಳ್ಳಬೇಕಿದೆ ಎಂದು ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಸಿ.ಆರ್.ಕೃಷ್ಣ ಮಾಹಿತಿ ನೀಡಿದರು.

ತಾಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮದಲ್ಲಿ ಬುಧವಾರ ರೇಷ್ಮೆ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ದ್ವಿತಳಿ ರೇಷ್ಮೆ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಶ್ರೀರಂಗಪಟ್ಟಣ ತಾಲೂಕು ರೇಷ್ಮೆ ಕೃಷಿ ಕಂಡ ಮೊದಲ ಕ್ಷೇತ್ರ. ಆದರೆ ಈ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಈಗಲೂ ಸಾಂಪ್ರದಾಯಿಕ ಬೆಳೆಗಳಾದ ಭತ್ತ ಮತ್ತು ಕಬ್ಬನ್ನು ಹೊರತುಪಡಿಸಿ ಆರ್ಥಿಕ ಬೆಳೆಯಾದ ರೇಷ್ಮೆ ಬೆಳೆಯಲು ಈ ಭಾಗದ ರೈತರು ನಿರಾಸಕ್ತಿ ಹೊಂದಿರುವುದು ಆಶ್ಚರ್ಯ ತರಿಸಿದೆ. ರೇಷ್ಮೆ ಬೆಳೆ ಕಬ್ಬು ಮತ್ತು ಭತ್ತಕ್ಕಿಂತ ಅತ್ಯಂತ ಕಡಿಮೆ ಖರ್ಚಿನೊಂದಿಗೆ ಅಲ್ಪಾವಧಿಯಲ್ಲಿ ಬೆಳೆದು ಲಾಭ ಗಳಿಸಬಹುದಾಗಿದೆ ಎಂದರು.

ರೇಷ್ಮೆ ಕೃಷಿಯಲ್ಲಿ ಈ ಹಿಂದಿನಂತೆ ಹೆಚ್ಚು ಶ್ರಮಪಡುವ ಅಗತ್ಯವಿಲ್ಲ. ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಯಾಗಿದ್ದು, ಸುಲಭವಾಗಿ ಕೃಷಿ ಮಾಡಬಹುದು. ರೇಷ್ಮೆ ಸಾಕಣೆ ಮಾಡಲು ಹಾಗೂ ಹಿಪ್ಪು ನೇರಳೆ ಬೆಳೆಯಲು ಹೆಚ್ಚು ನೀರು ಬೇಕಿಲ್ಲ. ಹನಿ ನೀರಾವರಿ ಪದ್ಧತಿ ಮೂಲಕ ತಿಂಗಳಿಗೊಮ್ಮೆ ನೀರು ಕೊಟ್ಟರೂ ಹಿಪ್ಪು ನೇರಳೆ ಬೆಳೆ ಕೈಗೆ ಸಿಗುತ್ತದೆ. ಸಾಕಷ್ಟು ಸುಧಾರಿತ ತಳಿಗಳು ಕೂಡ ಬಂದಿದ್ದು, ರೈತರು ಇವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ರೇಷ್ಮೆ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಬಿ.ಪುಟ್ಟಸ್ವಾಮಿ, ವಿಸ್ತರಣಾ ಅಧಿಕಾರಿ ಟಿ.ಜೈರಾಮು, ಸಹಾಯಕ ನಿರ್ದೇಶಕ ಸುರೇಶ್, ಸಿಎಸ್‌ಆರ್‌ಟಿ ವಿಜ್ಞಾನಿ ಕಾಳಪ್ಪ, ಇಲಾಖೆ ಅಧಿಕಾರಿ ಸಂಜಯ್, ಕೆ.ಶೆಟ್ಟಹಳ್ಳಿ ಗ್ರಾಮದ ರೈತರಾದ ಪುರುಷೋತ್ತಮ, ಮುರಳಿ, ಪರಮೇಶ್, ಚನ್ನಕೇಶವ, ಕೀರ್ತಿ, ಕೃಷ್ಣ ಇತರರಿದ್ದರು.