ವಿಜಯವಾಣಿ ಸುದ್ದಿಜಾಲ ಉಡುಪಿ
ಭಾರತದ ಇತಿಹಾಸವನ್ನು ಸೋಲಿನ ಇತಿಹಾಸವಾಗಿ ಹೆಣೆಯಲಾಗಿದೆ. ನಾವುಗಳು ಓದಿಕೊಂಡು ಬಂದ, ಬೋಧಿಸಿದ ಎಲ್ಲ ಇತಿಹಾಸವೂ ಸೋಲಿನದ್ದೇ ಆಗಿದೆ. ಪರಾಕ್ರಮಿ ಶಿವಾಜಿಯನ್ನೂ ಇಲಿಗೆ ಹೋಲಿಸುವ ಯತ್ನ ನಡೆದಿತ್ತು. ಕ್ರಿ.ಶ. 712ರಿಂದ ಈ ಕ್ಷಣದವರೆಗೂ ಏಕೆ ಸೋಲುತ್ತಿದ್ದೇವೆಂದರೆ ನಮ್ಮ ಮನೆಯವರ ಕುತಂತ್ರವೇ ಕಾರಣವಾಗಿದೆ. ನಮ್ಮದು ಸೋಲಿನ ಇತಿಹಾಸವಲ್ಲ, ಗೆಲುವಿನ ಇತಿಹಾಸ ಎಂದು ನಿವೃತ್ತ ಪ್ರಾಧ್ಯಾಪಕ, ಮಂಗಳೂರು ವಿಭಾಗ ಸಂಘಚಾಲಕ ಡಾ. ನಾರಾಯಣ ಶೆಣೈ ಅಭಿಮತ ವ್ಯಕ್ತಪಡಿಸಿದರು.
ಉಡುಪಿಯ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ಸಂವೇದನಾ ಫೌಂಡೇಷನ್ ಅರ್ಪಣೆಯಲ್ಲಿ ಯುವ ಸಮುದಾಯಕ್ಕೆ ಕರ್ನಾಟಕದ ಕರಾವಳಿಯ ಇತಿಹಾಸ ತಿಳಿಸಲು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದಲ್ಲಿ ಪ್ರಕಾಶ ಮಲ್ಪೆ ಹಾಗೂ ತಂಡದಿಂದ ನಿರ್ಮಾಣಗೊಂಡ 14 ನಿಮಿಷದ ಉಳ್ಳಾಲದ ವೀರರಾಣಿ ಅಬ್ಬಕ್ಕ ಕಿರುಚಿತ್ರವನ್ನು ಆಗಸ್ಟ್ 2ರಂದು ಬಿಡುಗಡೆಗೊಳಿಸಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಡಾ. ರಾಮು ಎಲ್. ಮಾತನಾಡಿದರು. ಡಾ.ಮಾ.ರವೀಂದ್ರ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ. ರಮೇಶ ಟಿ.ಎಸ್., ಐಕ್ಯುಎಸಿ ಸಂಚಾಲಕ ಡಾ. ವಿನಯಕುಮಾರ್ ಉಪಸ್ಥಿತರಿದ್ದರು.
ಶ್ರೀಪ್ರದಾ ಮತ್ತು ಸಂಪ್ರೀತಾ ಪ್ರಾರ್ಥಿಸಿದರು. ಪ್ರಕಾಶ ಮಲ್ಪೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಜಯಲಕ್ಷ್ಮೀ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಜ್ಯೋತಿ ಆಚಾರ್ಯ ವಂದಿಸಿದರು.
ಭಾರತದಲ್ಲಿ ಸ್ತ್ರೀಯರಿಗೆ ಸಮಾನತೆ ಇಲ್ಲ ಎಂದು ಈವರೆಗೂ ಹೇಳುತ್ತಲೇ ಇದ್ದೇವೆ. ಇದು ನಕಾರಾತ್ಮಕ ಬೆಳವಣಿಗೆ. ಪುರಾಣ ಕಾಲದಿಂದ ಸ್ವಾತಂತ್ರ್ಯ ಹೋರಾಟದವರೆಗೂ ಮಹಿಳೆಗೆ ಅವಕಾಶವಿತ್ತು. ರನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರು ಚನ್ನಮ್ಮ, ರಾಣಿ ಅಬ್ಬಕ್ಕಳ ರಾಜ್ಯಭಾರ, ಒನಕೆ ಓಬವ್ವಳ ಸಾಧನೆ ನಮಗೆಲ್ಲ ಮಾದರಿಯಲ್ಲವೇ? ದೇಶ-ನೆಲದ ಪ್ರಶ್ನೆ ಬಂದಾಗ ಖಡ್ಗ ಹಿಡಿದು ನಿಂತು ಪೋರ್ಚುಗೀಸರ ಎದೆ ನಡುಗಿಸಿದ ವೀರರಾಣಿ ಅಬ್ಬಕ್ಕ ನಮಗೆ ಮಾದರಿ-ಪ್ರೇರಣೆ ಆಗಬೇಕಿತ್ತು. ಆದರೆ, ಸ್ವಾತಂತ್ರ್ಯದ ನಂತರ ಯಾರ್ಯಾರೋ ಈ ದೇಶದ ಮೊಡೆಲ್ ಆಗಿದ್ದಾರೆ. ವಿವಾದವಾಗುವ ಕಾರಣದಿಂದ ಅವರ ಹೆಸರು ಉಲ್ಲೇಖಿಸುವುದಿಲ್ಲ. ವಿದ್ಯಾರ್ಥಿಗಳು ಇಂತಹ ಕಿರುಚಿತ್ರದ ಮೂಲಕ ದೇಶದ ನೈಜ ಇತಿಹಾಸ ಅರಿಯಬೇಕು ಎಂದು ಡಾ. ನಾರಾಯಣ ಶೆಣೈ ತಿಳಿಸಿದರು.
ಶಾಲಾ ಪಠ್ಯದಲ್ಲಿ ಅಬ್ಬಕ್ಕಳ ಕುರಿತು ಸಣ್ಣದಾಗಿ ಓದಿದ್ದೆವು. ಅವಳ ಸಾಹಸ, ಪ್ರತಿಭೆ, ಶೌರ್ಯ, ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ರೀತಿ ಈ ಕಿರುಚಿತ್ರ ಸಾದರಪಡಿಸಲಿದೆ. ನಮ್ಮ ಯುವಸಮುದಾಯಕ್ಕೆ ದೇಶದ ವೀರ ನಾರಿಯ ಇತಿಹಾಸ ತಿಳಿಸಲು ಪೂರಕವಾಗಿದೆ. | ಯಶ್ಪಾಲ್ ಸುವರ್ಣ. ಶಾಸಕ