ಶೆಟ್ಟಿಕೊಪ್ಪ ಜನತಾ ಕಾಲನಿ-ಚನಮಣಿ ರಸ್ತೆಯ ಕಿರುಸೇತುವೆ ಕುಸಿದಿರುವುದು.  
ಜಿಲ್ಲೆ

ಕಿರುಸೇತುವೆ. ಮೋರಿ, ರಸ್ತೆ ಕುಸಿತ

ಎಸ್.ಎನ್.ರವೀಂದ್ರ

ಎನ್.ಆರ್.ಪುರ: ಕಡಹಿನಬೈಲು ಗ್ರಾಮ ಪಂಚಾಯಿತಿಯ ಮೂರು ಪ್ರದೇಶಗಳಲ್ಲಿ ಇತ್ತೀಚೆಗೆ ಸುರಿದ ಮಳೆಗೆ ಕಿರುಸೇತುವೆ, ಮೋರಿ, ರಸ್ತೆ ಕುಸಿದಿವೆ. ಶೆಟ್ಟಿಕೊಪ್ಪ ಜನತಾ ಕಾಲನಿ-ಚನಮಣಿ ರಸ್ತೆಯ ಕಿರುಸೇತುವೆ ಮೂರು ದಿನಗಳ ಹಿಂದೆ ಸುರಿದ ಭಾರಿ ಮಳೆಗೆ ಕುಸಿದಿದೆ. ಜನತಾ ಕಾಲನಿ-ಚನಮಣಿಯ 3 ಕಿ.ಮೀ. ದೂರದ ರಸ್ತೆ ಮಧ್ಯೆ ಭೀಮನರಿ ಹಳ್ಳದ ಕಿರು ಸೇತುವೆಯ ಒಂದು ಭಾಗದ ರಿವಿಟ್ಮೆಂಟ್ ಕುಸಿದಿದೆ.

ಇನ್ನು ಕಡಹಿನಬೈಲು ಗ್ರಾಪಂನ ಎನ್.ಆರ್.ಪುರ-ಶಿವಮೊಗ್ಗ ಮುಖ್ಯರಸ್ತೆಯಿಂದ ದೊಡ್ಡಿಹಟ್ಟಿ-ಭದ್ರಾ ಕಾಲನಿ ಮೋರಿ ಕುಸಿದಿದೆ.
ಒಂದು ತಿಂಗಳ ಹಿಂದೆ ಪಿಡಬ್ಲುೃಡಿಯಿಂದ ಡಾಂಬರ್ ರಸ್ತೆ ನಿರ್ಮಿಸಿದ್ದರು. ದೊಡ್ಡಿಹಟ್ಟಿ ಸಮೀಪ ಎರಡು ಮೋರಿ ನಿರ್ಮಿಸಿದ್ದರು. ಭಾರಿ ಮಳೆಗೆ ಮೋರಿಯ ಒಂದು ಭಾಗದ ಮಣ್ಣು ಕೊಚ್ಚಿಕೊಂಡು ಹೋಗಿದೆ. ಮೋರಿ ಪಕ್ಕದಲ್ಲಿ ಕಲ್ಲಿನಿಂದ ರಿವಿಟ್ಮೆಂಟ್ ಕಟ್ಟಿ ದುರಸ್ತಿ ಮಾಡಿಸಬೇಕಾಗಿದೆ. ಇಲ್ಲದಿದ್ದರೆ ಮಳೆಗಾಲದಲ್ಲಿ ಮೋರಿ ಪೂರ್ಣ ಕೊಚ್ಚಿಕೊಂಡು ಹೋಗಲಿದೆ. ಇದೇ ರಸ್ತೆ ಪಕ್ಕದ ಕೆರೆಗೆ ರಸ್ತೆಯ ಒಂದು ಭಾಗ ಕುಸಿದಿದೆ. ಮಳೆಗಾಲದಲ್ಲಿ ರಸ್ತೆ ಇನ್ನಷ್ಟು ಕುಸಿಯಲಿದೆ. ಪಿಡಬ್ಲುೃಡಿ ಇಂಜಿನಿಯರ್, ಗುತ್ತಿಗೆದಾರರು ಸೇತುವೆ, ಮೋರಿ ಹಾಗೂ ರಸ್ತೆಯನ್ನು ಮುಂಗಾರು ಆರಂಭಕ್ಕೂ ಮುನ್ನ ದುರಸ್ತಿ ಮಾಡಿಸಬೇಕು ಎಂದು ದೊಡ್ಡಿಹಟ್ಟಿ ಹಾಗೂ ಭದ್ರಾ ಕಾಲನಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.