ಕಳಸ: ತಾಲೂಕಿನಾದ್ಯಂತ ಶುಕ್ರವಾರ ಗಾಳಿ, ಮಳೆ ಅಬ್ಬರ ಮುಂದುವರಿದು ಆಸ್ತಿಪಾಸಿಗೆ ಅಪಾರ ಹಾನಿಯಾಗಿದೆ.
ನಿರಂತರವಾಗಿ ಸುರಿದ ಮಳೆಯಿಂದ ಕುದುರೆಮುಖ-ಎಸ್.ಕೆ.ಬಾರ್ಡರ್ ರಾಜ್ಯ ಹೆದ್ದಾರಿಯಲ್ಲಿ ಕಿರು ಸೇತುವೆಯ ತಡೆಗೋಡೆ ಕುಸಿದು ಅಧಿಕ ಸಾಮರ್ಥ್ಯದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಸ್ಥಳದಲ್ಲಿ ಮರಳಿನ ಮೂಟೆ ಇಟ್ಟು ವಾಹನ ಸವಾರರಿಗೆ ಎಚ್ಚರಿಕೆ ನೀಡಲಾಗಿದೆ. ತಹಸೀಲ್ದಾರ್ ಬಸವರಾಜ್ ಸ್ಥಳ ಪರಿಶೀಲಿಸಿದರು.
ಸಂಸೆ ಗ್ರಾಪಂ ಪಾತಿಗುಡ್ಡೆ ಹಿಲ್ಡಾ ಮೊರಾಸ್ ಎಂಬುವವರ ಮನೆ ಸಂಪೂರ್ಣ ಕುಸಿದಿದೆ. ಮನೆಯಲ್ಲಿದ್ದ ಪಾತ್ರೆ, ಬಟ್ಟೆ , ದಿನಸಿ ಸಾಮಗ್ರಿಗಳು ಮಣ್ಣು ಪಾಲಾಗಿವೆ. ಗುರುವಾರ ರಾತ್ರಿಯಿಡೀ ಬೀಸಿದ ಗಾಳಿಗೆ ನೂರಾರು ಅಡಕೆ ಮರಗಳು ನೆಲಕಚ್ಚಿವೆ. ಐದು ದಿನಗಳಿಂದ ವಿದ್ಯುತ್ ಇಲ್ಲದೆ ತಾಲೂಕಿನ ಜನ ಕತ್ತಲೆಯಲ್ಲಿ ಕಾಲ ಕಳೆದಿದ್ದಾರೆ.