ಮದ್ದೂರು: ತಾಲೂಕಿನ ಬೆಸಗರಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯ ಹಿನ್ನಲೆಯಲ್ಲಿ ಬೆಸಗರಹಳ್ಳಿ ಗ್ರಾಮದ ಅಂಗಡಿ ಮುಂಗಟ್ಟುಗಳನ್ನು ಪೊಲೀಸರು ಶನಿವಾರ ಮುಚ್ಚಿಸಿದರು.
ಪೊಲೀಸರ ಸೂಚನೆ ಹಿನ್ನೆಲೆ ಬೆಳಗ್ಗೆ ಎಲ್ಲ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ಮಧ್ಯಾಹ್ನದ ವೇಳೆಗೆ ಅಂಗಡಿ ಮುಂಗಟ್ಟುಗಳನ್ನು ತೆರೆದ ವರ್ತಕರು ವ್ಯಾಪಾರ-ವಹಿವಾಟಿನಲ್ಲಿ ತೊಡಗಿಸಿಕೊಂಡರು.
ಬೆಸಗರಹಳ್ಳಿ ಗ್ರಾಮದ ಅಂಗಡಿ-ಮುಂಗಟ್ಟುಗಳನ್ನು ಪೊಲೀಸರು ಬಲವಂತವಾಗಿ ಮುಚ್ಚಿಸಿದ್ದಾರೆ. ಮುಚ್ಚದಿದ್ದರೆ ಯಾವುದೇ ಅನಾಹುತ ಸಂಭವಿಸಿದರೆ ನಿಮ್ಮ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ಹೆದರಿಸಿದರು. ಆದ್ದರಿಂದ ಅಂಗಡಿಗಳನ್ನು ಮುಚ್ಚಬೇಕಾಯಿತು ಎಂದು ವರ್ತಕರು ಬೇಸರ ವ್ಯಕ್ತಪಡಿಸಿದರು.
ಲೋಕಸಭೆ, ವಿಧಾನಸಭೆ ಚುನಾವಣೆ ಸಂದರ್ಭದಲ್ಲೂ ಪೊಲೀಸರು ಅಂಗಡಿಗಳನ್ನು ಬಂದ್ ಮಾಡಿಸಿರಲಿಲ್ಲ. ಆದರೆ, ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಗೆ ಬಂದ್ ಮಾಡಿಸಿರುವ ಕ್ರಮ ಸರಿಯಲ್ಲ ಎಂದು ವರ್ತಕರು ಪೊಲೀಸರ ಕ್ರಮವನ್ನು ಖಂಡಿಸಿದರು.
ಗ್ರಾಮದಲ್ಲಿ ಶನಿವಾರ ಸಂತೆಯಿದ್ದ ಕಾರಣ ಅಂಗಡಿಗಳನ್ನು ಮುಚ್ಚಿದ್ದರಿಂದ ವ್ಯಾಪಾರಿಗಳು ಹಾಗೂ ಗ್ರಾಹಕರು ಗೊಂದಲಕ್ಕೀಡಾದರು. ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.