ಜಿಲ್ಲೆ

ಅಂಗಡಿಗೆ ನುಗ್ಗಿ ವ್ಯಾಪಾರಿಗಳ ಮೇಲೆ ಹಲ್ಲೆ

ರವಿ ಎಸ್. ಬಳೂಟಗಿ

ಹುಬ್ಬಳ್ಳಿ: ಆಟೋ ನಿಲುಗಡೆ ವಿಷಯದಲ್ಲಿ ವಾಗ್ವಾದ ಉಂಟಾಗಿ ಗುಂಪೊಂದು ಅಂಗಡಿಗೆ ನುಗ್ಗಿ ಇಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಜೆ.ಸಿ. ನಗರದಲ್ಲಿ ಮಂಗಳವಾರ ನಡೆದಿದೆ.

ಅಂಗಡಿಕಾರರಾದ ಅಭಿಷೇಕ, ಮಂಜುನಾಥ ಹಲ್ಲೆಗೊಳಗಾದವರು.

ಅಂಗಡಿ ಎದುರು ಆಟೋ ನಿಲ್ಲಿಸಿದನ್ನು ತೆಗೆಯುವಂತೆ ಆಟೋ ಚಾಲಕ ಅಶ್ರಖಾನ್ ಬಾಗಲಕೋಟೆ ಎಂಬುವವರಿಗೆ ಅಂಗಡಿಕಾರರು ತಿಳಿಸಿದ್ದಾರೆ. ಈ ವೇಳೆ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಪರಸ್ಪರ ಕೈಕೈ ಮಿಲಾಯಿಸಿದ್ದಾರೆ. ಇದಾದ ನಂತರ ಆಟೋ ಚಾಲಕ ತಮ್ಮ ಸಂಬಂಧಿಕರೊಂದಿಗೆ ಗುಂಪು ಕಟ್ಟಿಕೊಂಡು ಬಂದು ಅಂಗಡಿಗೆ ನುಗ್ಗಿ ಅಂಗಡಿಕಾರರ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ಥಳಕ್ಕೆ ದೌಡಾಯಿಸಿದ ಎಸಿಪಿ ಉಮೇಶ ಚಿಕ್ಕಮಠ, ಶಹರ ಠಾಣೆ ಪಿಐ ಮೊಹ್ಮದ್ ರಫೀಕ್ ತಹಸೀಲ್ದಾರ್ ಪರಿಶೀಲನೆ ನಡೆಸಿ ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸಿದರು. ಈ ಬಗ್ಗೆ ಸುಮಂತ ಜಮಖಂಡಿ ಅವರು ದೂರು ನೀಡಿದ್ದಾರೆ. ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.