ಅಳವಂಡಿ: ಪಕೀರನ ಕೆರೆ ನೀರು ಮಲಿನಗೊಂಡಿದ್ದಕ್ಕೆ ಆಕ್ರೋಶಗೊಂಡ ಕವಲೂರಿನ ಗ್ರಾಮಸ್ಥರು ದಂಡೆ ಮೇಲಿನ ಅಂಗಡಿಗಳನ್ನು ತೆರವುಗೊಳಿಸುವಂತೆ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದಾರೆ.
ಇದನ್ನೂ ಓದಿ:http://ಅಂಗಡಿಗಳಿಂದ ಪಕೀರನ ಕೆರೆ ಮಲಿನ
ಗ್ರಾಮಕ್ಕೆ ಹೊಂದಿಕೊಂಡ ಈ ಕೆರೆ ಜನರ ಜೀವನಾಡಿ. 8 ರಿಂದ 10 ಎಕರೆ ವ್ಯಾಪ್ತಿಯನ್ನು ಹೊಂದಿದೆ. ಕೆರೆ ತುಂಬಿದರೆ ಜನ ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಬಟ್ಟೆ ತೊಳೆಯಲು ಅನೂಕೂಲವಾಗಲಿದೆ.
ಆದರೆ, ಇತ್ತೀಚಿಗೆ ಇದಕ್ಕೆ ನೀರಿನ ಹರಿವು ಕಡಿಮೆಯಾದ ಕಾರಣ ಸಿಂಗಟಾಲೂರು ಏತ ನೀರಾವರಿ ಯೋಜನೆ ಕಾಲುವೆಯಿಂದ ನೀರು ತುಂಬಿಸಿ ಜನರ ನೀರಿನ ಬವಣೆ ತಪ್ಪಿಸಲಾಗಿದೆ.
ಗ್ರಾಮಗಳು ಬೆಳೆದಂತೆ ವಾಣಿಜ್ಯ ವಹಿವಾಟು ಹೆಚ್ಚಾಗಿದೆ. ಕೆರೆ ದಡದಲ್ಲಿ ವಾಣಿಜ್ಯ ಮಳೆಗೆಗಳು ಹೆಚ್ಚಾಗಿವೆ. ಕೆಲವೊಂದು ವ್ಯಾಪಾರಗಾರರು ಅಂಗಡಿ ತ್ಯಾಜ್ಯವನ್ನು ಕೆರೆಯಲ್ಲಿ ಹಾಕುತ್ತಿರುವುದರಿಂದ ನೀರು ಮಲಿನಗೊಂಡು ಹಸಿರು ಬಣ್ಣಕ್ಕೆ ತಿರುಗಿ ಬಳಕೆಗೆ ನಿರುಪಯುಕ್ತವಾಗುತ್ತಿದೆ. ಕೆರೆಯಲ್ಲಿ ಮದ್ಯದ ಬಾಟಲಿಗಳು ರಾಶಿ ರಾಶಿಯಾಗಿ ಬಿದ್ದು ನೀರನ್ನು ಮತ್ತಷ್ಟು ಗಲೀಜು ಮಾಡಿವೆ.
ಕೆರೆಗೆ ಬರುವ ನೀರಿನ ಮಾರ್ಗದಲ್ಲಿ ಕೆಲ ಸಾರ್ವಜನಿಕರು ಬಚ್ಚಲು ನೀರನ್ನು ಬಿಟ್ಟಿರುವುದು ನೀರು ಕಲುಷಿತಕ್ಕೆ ಕಾರಣ ಎಂದು ಗ್ರಾಮಸ್ಥರ ಆರೋಪ.
ಪಕೀರನ ಕೆರೆಗೆ ಅಂಗಡಿಗಳ ತ್ಯಾಜ್ಯ ಹಾಗೂ ಕೆಲ ಸಾರ್ವಜನಿಕರು ಬಚ್ಚಲು ನೀರನ್ನು ಕೆರೆಗೆ ಬಿಡುವುದರಿಂದ ನೀರು ಮಲಿನಗೊಂಡು ಹಸಿರು ಬಣ್ಣಕ್ಕೆ ತಿರುಗಿದ್ದು, ಕೂಡಲೇ ಗ್ರಾಪಂ ಕ್ರಮ ಕೈಕೊಂಡು ಕೆರೆಯ ಸ್ವಚ್ಛತೆಗೆ ಆದ್ಯತೆ ನೀಡಲಿ.ವಿರುಪಾಕ್ಷಿ ತುರ್ಕಾಣ ಗ್ರಾಮಸ್ಥ, ಅಳವಂಡಿ ಗ್ರಾಮದ ಪಕೀರನ ಕೆರೆಯ ದಂಡೆಯ ಮೇಲಿರುವ ಅಂಗಡಿಗಳು ಬೀಸಾಡುವ ತ್ಯಾಜ್ಯದಿಂದ ನೀರು ಮಲಿನಗೊಳ್ಳುತ್ತಿದೆ ಎಂದು ಗ್ರಾಮಸ್ಥರು ಗ್ರಾಪಂಗೆ ಮನವಿ ಸಲ್ಲಿಸಿದ್ದು. ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಕೊಳ್ಳಲಾಗುವುದು.ಚಂದುಸ್ವಾಮಿಪಿಡಿಒ, ಕವಲೂರು