ನಜೀರ್ ಅಹ್ಮದ್ ಮತ್ತು ಮಹಬೂಬ್ ಸಾಬ್ (ಮೃತರು). ಆರೋಪಿ ಸಹೋದರ ಬಷೀರ್ ಅಹ್ಮದ್.  
ಜಿಲ್ಲೆ

ಶೂಟ್ ಔಟ್ ಪ್ರಕರಣ, ಮಸೀದಿಗೆ ಹೋಗುತ್ತಿದ್ದ ಅಣ್ಣ, ಅಣ್ಣನ ಮಗನ ಮೇಲೆ ದಾಳಿ

Rest of Bengaluru - Chikkaballapura - Venkatesh

ಚಿಕ್ಕಬಳ್ಳಾಪುರ: ಮಸೀದಿಗೆ ನಮಾಜ್ ಮಾಡಲು ಹೋಗುತ್ತಿದ್ದ ಅಣ್ಣ ಮತ್ತು ಅಣ್ಣನ ಮಗನ ಮೇಲೆ ವ್ಯಕ್ತಿಯೊಬ್ಬ ಪಿಸ್ತೂಲ್‌ನಿಂದ ಶೂಟ್ ಔಟ್ ಮಾಡಿದರ ಜತೆಗೆ ಮಚ್ಚಿನಿಂದ ಹಲ್ಲೆ ಮಾಡಿದ್ದು ತಂದೆ ಮಗ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ.
ಗ್ರಾಮದ ಮಹಬೂಬ್ ಸಾಬ್ (80) ಮತ್ತು ಪುತ್ರ ನಜೀರ್ ಅಹ್ಮದ್ (58) ಮೃತರು. ಆರೋಪಿ ಸಹೋದರ ಬಷೀರ್ ಅಹ್ಮದ್. ಶೂಟ್ ಔಟ್ ದಾಳಿಯಿಂದ ಸ್ಥಳದಲ್ಲಿಯೇ ನಜೀರ್ ಮೃತಪಟ್ಟರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮಹಬೂಬ್ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಡಿವೈಎಸ್‌ಪಿ ಶಿವಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಪ್ರಕರಣ ನಡೆದ ಕೆಲ ತಾಸುಗಳಲ್ಲಿಯೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

*ಪ್ರಕರಣದ ಹಿನ್ನೆಲೆ
ಮಹಬೂಬ್ ಸಾಬ್ ಮತ್ತು ಬಷೀರ್ ಅಹ್ಮದ್ ಅಣ್ಣ ತಮ್ಮಂದಿರು. ಆರೋಪಿ ಬಷೀರ್ ಸೌದಿಯಲ್ಲಿ ಟೈಲರ್ ಆಗಿ ಕೆಲಸ ಮಾಡುತ್ತಿದ್ದ. ಈತನಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದು ಹೆಂಡತಿಗೆ ವಿಚ್ಚೇದನ ನೀಡಿದ್ದ.
ಕಳೆದ 2 ವರ್ಷಗಳ ಹಿಂದೆ ಸ್ವಂತ ಗ್ರಾಮಕ್ಕೆ ಬಂದು ಏಕಾಂಗಿ ಜೀವನ ನಡೆಸುತ್ತಿದ್ದ. ಇದರ ನಡುವೆ ಅಣ್ಣ ಮಹಬೂಬ್ ಸಾಬ್ ಮತ್ತು ಅಣ್ಣನ ಮಗ ನಜೀರ್ ಮೇಲೆ ದಾಳಿ ನಡೆಸಿದ್ದಾನೆ. ಸಹೋದರರ ನಡುವೆ ಈ ಹಿಂದೆಯೇ ನ್ಯಾಯಯುತವಾಗಿ ಆಸ್ತಿಪಾಸ್ತಿ ಹಂಚಿಕೆಯಾಗಿತ್ತು ಎನ್ನಲಾಗಿದೆ. ಇದರಿಂದ ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿ, ತನಿಖೆ ಕೈಗೊಳ್ಳಲಾಗುತ್ತಿದೆ. ದಾಳಿಯಲ್ಲಿ ಬಳಕೆಯಾದ ಪಿಸ್ತೂಲ್‌ಗೆ ಪರವಾನಗಿ ಪಡೆಯಲಾಗಿತ್ತೇ? ಎಂಬುದರ ತನಿಖೆ ನಡೆಯುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ತಿಳಿಸಿದ್ದಾರೆ.