ಮೈಸೂರು: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮೇಲೆ ವಕೀಲರೊಬ್ಬರು ಶೂ ಎಸೆದಿರುವುದನ್ನು ಖಂಡಿಸಿ ಯುವ ಕಾಂಗ್ರೆಸ್ ಜಿಲ್ಲಾ ಘಟಕದಿಂದ ನಗರದ ಎಫ್‌ಟಿಎಸ್ ವೃತ್ತದ ಅಂಬೇಡ್ಕರ್ ಪ್ರತಿಮೆ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಮುಖ್ಯ ನ್ಯಾಯಮೂರ್ತಿ ಗವಾಯಿ ಅವರ ಮೇಲೆ ಶೂ ಎಸೆದಿರುವುದು ಖಂಡನೀಯ. ಶೂ ಎಸೆದಿರುವ ರಾಕೇಶ್ ಕಿಶೋರ್ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಆತನನ್ನು ಗಡಿಪಾರು ಮಾಡಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಎಚ್ಚರ ವಹಿಸಬೇಕು ಎಂದು ಒತ್ತಾಯಿಸಲಾಯಿತು.
ದೇಶದಲ್ಲಿ ಪ್ರಜಾಪ್ರಭುತ್ವ, ಜಾತ್ಯತೀತ ವ್ಯವಸ್ಥೆಯನ್ನು ನಾಶ ಮಾಡಿ ಮನುವಾದ ಮರು ಸ್ಥಾಪಿಸುವ ಪ್ರಯತ್ನ ನಡೆಯುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಭಾಗವಾಗಿ ಈ ದಾಳಿ ನಡೆದಿದೆ. ಹಾಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಯನ್ನು ಕಠಿಣ ಕಾನೂನು ಕ್ರಮಕ್ಕೆ ಒಳಪಡಿಸಬೇಕು ಎಂದು ಆಗ್ರಹಿಸಲಾಯಿತು.
ವಕೀಲ ರಾಕೇಶ್ ಕಿಶೋರ್ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅರ್ಜಿಯು ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅಭಿಪ್ರಾಯಪಟ್ಟು, ಆರ್ಕಿಯಾಜಿಕಲ್ ಸರ್ವೇ ಆಫ್ ಇಂಡಿಯಾಯದಡಿ ಪರಿಹರಿಸಿಕೊಳ್ಳುವಂತೆ ಆದೇಶಿಸಿದ್ದರು. ಆದರೆ, ಇದರಿಂದ ಕೋಪಗೊಂಡು ಅವರ ಮೇಲೆ ಶೂ ಎಸೆದಿರುವುದು ಅಕ್ಷಮ್ಯ ಅಪರಾಧ ಎಂದು ಯುವ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ದೀಪಕ್ ಶಿವಣ್ಣ, ಅಬ್ರಾರ್ ಮೊಹಮ್ಮದ್, ರಫೀಕ್ ಅಲಿ, ನವೀನ್ ಕೆಂಪಿ, ಜೆ. ಪ್ರತಾಪ್, ಇಮಾನ್ವಲ್ ಶರತ್, ರಿಜ್ವಾನ್ ಪಾಷಾ, ನಿಶಾಂತ್ ಪಟೇಲ್, ಚಂದ್ರು ನರಸಿಂಹಮೂರ್ತಿ, ವಿಷ್ಣು ಪ್ರಿಯನ್, ಮಂಜೇಶ್, ವಿರಾಟ್ ಗೌಡ, ರಾಕೇಶ್ ಹಾಗೂ ಇತರರು ಪಾಲ್ಗೊಂಡಿದ್ದರು.