ಶಿರಸಿ: ನಗರದಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿದ್ದ ವಾಹನ ಸವಾರರಿಗೆ ಶಿರಸಿ ಪೊಲೀಸರು ಶುಕ್ರವಾರ ಬಿಸಿ ಮುಟ್ಟಿಸಿದ್ದಾರೆ.
ನಗರದ ಪ್ರಮುಖ ರಸ್ತೆಗಳಲ್ಲಿ ಹಾಗೂ ಸರ್ಕಲ್‌ಗಳಲ್ಲಿ ಅಡ್ಡಾದಿಡ್ಡಿ ಪಾಕಿರ್ಂಗ್ ಮಾಡಿದ್ದ ವಾಹನಗಳನ್ನು ಪೊಲೀಸರು ಟೊಯಿಂಗ್ ವಾಹನದ ಮೂಲಕ ಠಾಣೆಗೆ ರವಾನಿಸಿದ್ದಾರೆ.
ಶಿರಸಿ ನಗರದಲ್ಲಿ ಆಗುತ್ತಿರುವ ಸಂಚಾರ ದಟ್ಟಣೆ ಕುರಿತು ವಿಜಯವಾಣಿ ವಿಸ್ತಾರವಾಗಿ ಸುದ್ದಿಯನ್ನು ಪ್ರಕಟಿಸಿತ್ತು. ನಗರ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸ್ ಇಲಾಖೆ ಸಾಕಷ್ಟು ಕ್ರಮ ಕೈಗೊಂಡಿದ್ದರೂ ಸಾರ್ವಜನಿಕರು ನಿಯಮಗಳನ್ನು ಮೀರುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ಇಳಿದ ಪೊಲೀಸ್ ಇಲಾಖೆ ವಾಹನ ಸವಾರರಿಗೆ ಬಿಸಿ ಮುಟ್ಟಿಸುವುದರ ಜತೆಗೆ ಖಡಕ್ ಎಚ್ಚರಿಕೆಯನ್ನೂ ನೀಡಿದ್ದಾರೆ.
ನಗರದ ಹಳೇ ಬಸ್ ನಿಲ್ದಾಣ ವೃತ್ತ, ಶಿವಾಜಿ ಚೌಕ್, ಸಿ.ಪಿ. ಬಜಾರ್ ಸೇರಿ ಹಲವೆಡೆ ಕಾರ್ಯಾಚರಣೆ ನಡೆಸಿದ ಪೊಲೀಸರು ನೂರಾರು ವಾಹನಗಳನ್ನು ವಶಕ್ಕೆ ಪಡೆದುಕೊಂಡು ದಂಡ ಕಟ್ಟಿಸಿಕೊಂಡು ಬಿಡುಗಡೆಗೊಳಿಸಿದ್ದಾರೆ.
ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸ್ ಇಲಾಖೆ ಹಲವು ರಸ್ತೆಗಳನ್ನು ಏಕಮುಖ ಸಂಚಾರ ರಸ್ತೆಯನ್ನಾಗಿ ಮಾರ್ಪಾಡು ಗೊಳಿಸಿದೆ. ವಾಹನ ಸವಾರರು ಸಂಚಾರಿ ನಿಯಮಗಳನ್ನು ತಪ್ಪದೇ ಪಾಲಿಸುವಂತೆ ಪೊಲೀಸ್ ಇಲಾಖೆ ತಿಳಿಸಿದೆ.