ಜಿಲ್ಲೆ

ಗಮನ ಸೆಳೆದ ಭವ್ಯ ಶೋಭಾಯಾತ್ರೆ

Dharwada - Santosh Vaidya

ಹುಬ್ಬಳ್ಳಿ: ಗೋಕುಲ ರಸ್ತೆ ಕೈಗಾರಿಕಾ ವಸಾಹತು ಪ್ರದೇಶದಲ್ಲಿನ ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ವತಿಯಿಂದ ಶ್ರೀ ಹನುಮಂತ ದೇವರ ನೂತನ ವಿಗ್ರಹ, ವಿಘ್ನೇಶ್ವರ, ಶ್ರೀ ಗಣಪತಿ ಮೂರ್ತಿಯ ರಜತ ಕವಚ ಮತ್ತು ಪ್ರಭಾವಳಿಗಳ ಶೋಭಾಯಾತ್ರೆ ಸೋಮವಾರ ಸಂಭ್ರಮದಿಂದ ಜರುಗಿತು.

ಸಂಘದ ಪದಾಧಿಕಾರಿಗಳು, ಸದಸ್ಯರು, ಭಕ್ತರು ಪಾಲ್ಗೊಂಡಿದ್ದರು. ಗೋಕುಲ ರಸ್ತೆ ಕೈಗಾರಿಕಾ ವಸಾಹತು ಪ್ರದೇಶದ 1ನೇ ಗೇಟ್​ನಿಂದ ಆರಂಭಗೊಂಡ ಶೋಭಾಯಾತ್ರೆಯು ರವಿನಗರ ಮಾರ್ಗವಾಗಿ, ಹುಡಾ ಕೈಗಾರಿಕಾ ಪ್ರದೇಶ, ಗೋಕುಸ ರಸ್ತೆ ಕೈಗಾರಿಕಾ ವಸಾಹತು ಪ್ರದೇಶ 2ನೇ ಗೇಟ್, ಎಂ.ಟಿ. ಸಾಗರ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಸಂಚರಿಸಿತು. ಡೊಳ್ಳು, ವಾದ್ಯ ಮೇಳಗಳೊಂದಿಗೆ ಶೋಭಾಯಾತ್ರೆ ಗಮನ ಸೆಳೆಯಿತು. ಶ್ರೀ ರಾಘವೇಂದ್ರ ಮಠದ ಶ್ರೀನಿವಾಸ ಕಟ್ಟಿ ಆಚಾರ್ಯರ ನೇತೃತ್ವದಲ್ಲಿ ಪಂಚರತ್ನ ಪೂಜೆಗಳೊಂದಿಗೆ ಸಂಪನ್ನಗೊಳಿಸಲಾಯಿತು.

22ರಂದು ಬೆಳಗ್ಗೆ 5 ಗಂಟೆಯಿಂದ ಪುಣ್ಯಾಹವಾಚನ, ದೇವತಾ ಸ್ಥಾಪನೆ, ಪ್ರತಿಷ್ಠಾಪನಾ ಹೋಮ, ಗಣಹೋಮ, ನವಗ್ರಹ ಹೋಮಗಳೊಂದಿಗೆ ಪೂರ್ಣಾಹುತಿ ಜರುಗಲಿದೆ. ಬಳಿಕ ಪೂರ್ಣ ಕಲಶಗಳಿಂದ ನೂತನ ಮೂರ್ತಿಗೆ ಅಭಿಷೇಕ ಮಾಡಲಾಗುವುದು. ಸುಕ್ಷೇತ್ರ ಶಿರಹಟ್ಟಿಯ ಶ್ರೀ ಫಕೀರ ಸಿದ್ಧರಾಮೇಶ್ವರ ಸ್ವಾಮೀಜಿಯವರು ಶ್ರೀ ಹನುಮಂತದೇವರ ನೂತನ ಮೂರ್ತಿ ಪ್ರತಿಷ್ಠಾಪನೆ ಮಾಡುವರು. ವಿಘ್ನೕಶ್ವರ ಶ್ರೀ ಗಣಪತಿ ಮೂರ್ತಿಯ ರಜತ ಕವಚ ಮತ್ತು ಪ್ರಭಾವಳಿಗಳನ್ನು ಲೋಕಾರ್ಪಣೆೆಗೊಳಿಸಲಾಗುವುದು. ಬಳಿಕ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಮಹಾಪ್ರಸಾದ ಇರಲಿದೆ ಎಂದು ಸಂಘ ತಿಳಿಸಿದೆ.