ಜಿಲ್ಲೆ

ಹೊಸಕೋಟೆ ಗ್ರಾ.ಪಂ.ಗೆ ಶೋಭಾ ಲೋಕೇಶ್ ಅಧ್ಯಕ್ಷೆ

ತಿ.ನರಸೀಪುರ: ತಾಲೂಕಿನ ಹೊಸಕೋಟೆ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಶೋಭಾ ಲೋಕೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಹಳೇ ಕೆಂಪಯ್ಯನಹುಂಡಿ ಗ್ರಾಮದ ಹೊಸಕೋಟೆ ಗ್ರಾಮ ಪಂಚಾಯಿತಿಯ ಹಿಂದಿನ ಅಧ್ಯಕ್ಷೆ ನಂದಿನಿ ರಾಜೇಂದ್ರ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆಸಲಾಯಿತು. ಅಧ್ಯಕ್ಷ ಸ್ಥಾನಕ್ಕೆ ಶೋಭಾ ಲೋಕೇಶ್ ಒಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು.

ಗ್ರಾಮ ಪಂಚಾಯಿತಿಯ 13 ಸದಸ್ಯರಲ್ಲಿ 11 ಮಂದಿ ಹಾಜರಾಗಿ ಅಧ್ಯಕ್ಷರ ಅವಿರೋಧ ಆಯ್ಕೆಗೆ ಸಮ್ಮತಿಸಿದರು. ನಾಗರಾಜು ಹಾಗೂ ನೀಲಮ್ಮ ಗೈರು ಹಾಜರಾಗಿದ್ದರು. ಅವಿರೋಧ ಆಯ್ಕೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಅಧ್ಯಕ್ಷರ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಅವಿರೋಧ ಆಯ್ಕೆಗೆ ಸಹಕರಿಸಿದ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರನ್ನು ನೂತನ ಅಧ್ಯಕ್ಷರು ಸಾಮೂಹಿಕವಾಗಿ ಸನ್ಮಾನಿಸಿದರು. ಚುನಾವಣಾ ಅಧಿಕಾರಿಯಾಗಿ ಸಹಾಯಕ ರೇಷ್ಮೆ ನಿರ್ದೇಶಕ ಎನ್.ಕೆ. ಕೆಂಪರಾಜು ಕಾರ್ಯನಿರ್ವಹಿಸಿದರು.

ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ಮಹದೇವಣ್ಣ, ಗ್ರಾಪಂ ಮಾಜಿ ಅಧ್ಯಕ್ಷ ಕೆ.ಅರುಣ್ ಕುಮಾರ್, ವರುಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಮುದ್ದೇಗೌಡ, ಜಿ.ಪಂ. ಮಾಜಿ ಸದಸ್ಯ ಕೆ.ಮಹದೇವ, ಗುತ್ತಿಗೆದಾರ ಮಾಧು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಜಾನಕಮ್ಮ, ಮಾಜಿ ಅಧ್ಯಕ್ಷ ಎಂ.ಆನಂದ, ಸದಸ್ಯರಾದ ಗಂಗಾಧರ, ಕಾವ್ಯಾಶ್ರೀ, ಜಯಲಕ್ಷ್ಮೀ, ಎಂ.ಬಾಲಕೃಷ್ಣ, ಎ.ಸತೀಶ, ನಾಗರಾಜು, ಪ್ರಭಾರ ಪಿಡಿಒ ಅಮ್ಜದ್ ಪಾಷ, ಕಾರ್ಯದರ್ಶಿ ಪುಟ್ಟರಾಜು, ಮುಖಂಡರಾದ ಇಂಡ್ವಾಳು ಲೋಕೇಶ್, ಆರ್.ಪಿ. ಹುಂಡಿ ನಾಗರಾಜು, ಹರೀಶ್, ಸಿದ್ದಪ್ಪ, ರಘು, ಗಿರೀಶ್, ಕುಮಾರ ಹಾಗೂ ಇತರರು ಇದ್ದರು.