ಆಲೂರು: ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರ ಅನುಯಾಯಿಯಾಗಿದ್ದ ಶಿವಶರಣ ಹಡಪದ ಅಪ್ಪಣ್ಣ ತಮ್ಮ ವಚನಗಳ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದ ಮಹಾನ್ ಶರಣರಾಗಿದ್ದಾರೆ. ಅವರ ವಚನಗಳು ಹಾಗೂ ಚಿಂತನೆಗಳು ಮನುಕುಲದ ಉದ್ಧಾರಕ್ಕೆ ದಾರಿದೀಪಗಳಾಗಿವೆ ಎಂದು ತಹಸೀಲ್ದಾರ್ ಮಲ್ಲಿಕಾರ್ಜುನ್ ಹೇಳಿದರು.
ಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಡಪದ ಅಪ್ಪಣ್ಣ ಅವರು ಸಾಮಾಜಿಕ ಅಸಮಾನತೆ, ಅಸ್ಪಶ್ಯತೆ, ಜಾತಿ ವ್ಯವಸ್ಥೆ, ಕಂದಾಚಾರ, ಮೂಢನಂಬಿಕೆ ವಿರುದ್ಧ ಹೋರಾಡಿ ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರಲು ತಮ್ಮ ವಚನಗಳ ಮೂಲಕ ಶ್ರಮಿಸಿರುವುದು ಅವಿಸ್ಮರಣೀಯ ಎಂದರು.
ಸವಿತಾ ಸಮಾಜದ ಯುವ ಸಾಹಿತಿ ಪವನ್ ಆಲೂರು ಮಾತನಾಡಿ, ಸಮಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿದ ಶರಣರು, ಸಂತರು, ದಾರ್ಶನಿಕರು, ಯಾವುದೇ ಒಂದು ಜಾತಿಗೆ ಸೀಮಿತವಲ್ಲ. ಅನುಭವ ಮಂಟಪದಲ್ಲಿ ಬಸವಣ್ಣನವರಿಗೆ ಹಡಪದ ಅಪ್ಪಣ್ಣನವರು ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಕಾಯಕ ತತ್ವದಡಿ ಬದುಕು ರೂಪಿಸಿಕೊಳ್ಳುವುದೇ ಶರಣರ ಆಶಯವಾಗಿತ್ತು ಎಂದರು.
ಸವಿತಾ ಸಮಾಜದ ಜಿಲ್ಲಾಧ್ಯಕ್ಷ ರವಿಕುಮಾರ್ ಮಾತನಾಡಿ, ಹಡಪದ ಅಪ್ಪಣ್ಣ ಅವರು ಸಾಮಾಜಿಕ ಅಸಮಾನತೆ, ಅಸ್ಪಶ್ಯತೆ, ಜಾತಿ ವ್ಯವಸ್ಥೆ, ಕಂದಾಚಾರ, ಮೂಢನಂಬಿಕೆ ವಿರುದ್ಧ ಹೋರಾಡಿ ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರಲು ತಮ್ಮ ವಚನಗಳ ಮೂಲಕ ಶ್ರಮಿಸಿರುವುದು ಅವಿಸ್ಮರಣೀಯ ಎಂದರು.
ಕಾರ್ಯಕ್ರಮದಲ್ಲಿ ಸವಿತಾ ಸಮಾಜದ ಆಲೂರು ತಾಲೂಕು ಅಧ್ಯಕ್ಷ ಕುಮಾರಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಗುಲಾಮ್ ಸತ್ತಾರ್, ಚರ್ಚ್ ಫಾದರ್ ಬಸವರಾಜು, ವೀರಶೈವ ಲಿಂಗಾಯತ ಸಮಾಜದ ಸಹಕಾರ್ಯದರ್ಶಿ ಡಾ. ಜಯರಾಜ್, ಅಕ್ಷರ ದಾಸೋಹ ಸಹಾಯಕರ ಅಧ್ಯಕ್ಷರಾದ ಸಿದ್ದೇಶ್, ಸಿಡಿಪಿಒ ಮಲ್ಲೇಶ್ ಇತರರು ಇದ್ದರು.