ಕೆಆರ್‌ಎಸ್: ಉತ್ತರ, ದಕ್ಷಿಣ ಭಾರತದ ಪರಂಪರೆಯ ಸಮ್ಮಿಲನವಾಗಿರುವ ಕಾವೇರಿ ಆರತಿಯನ್ನು ಮೊದಲ ಬಾರಿಗೆ ಬಹಳ ವಿಶೇಷವಾಗಿ ಅರ್ಥಪೂರ್ಣವಾಗಿ ಆಯೋಜಿಸಲಾಗಿದೆ. ಕಾವೇರಿ ಆರತಿ ಎಲ್ಲರನ್ನೂ ಒಳಗೊಂಡಿದ್ದು, ಪವಿತ್ರ ಭಾವನೆ ಎಲ್ಲರಲ್ಲೂ ಬಂದು ಜನರ ಮನಸಿಗೆ ಮುದ ನೀಡಲಿ ಎಂದು ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾಪನ ಮಠಾಧ್ಯಕ್ಷ ಡಾ.ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ ಹೇಳಿದರು.
ಕಾವೇರಿ ಆರತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಕನಸಿನ ಯೋಜನೆಯಾದ ಕಾವೇರಿ ಆರತಿ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಬರದ ನಾಡನ್ನು ಹಸಿರು ಮಾಡಿದ ಕೆಆರ್‌ಎಸ್‌ನ ಪವಿತ್ರ ಸ್ಥಳದಲ್ಲಿ ಕಾವೇರಿ ಆರತಿ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ನಾವೆಲ್ಲರೂ ನೆನಪಿಸಿಕೊಳ್ಳಬೇಕು ಎಂದರು.
ಪ್ರಕೃತಿಯನ್ನು ಪೂಜಿಸಿವುದು ನಮ್ಮ ಸಂಸ್ಕೃತಿಯಲ್ಲೇ ಬಂದಿದೆ. ಹರಪ್ಪ ಮತ್ತು ಮೊಹೆಂಜೋದಾರೋ ಕಾಲದಿಂದಲೂ ಇದನ್ನು ಕಾಣಬಹುದು. ಆಧುನಿಕ ಯುಗಮಾನದಲ್ಲೂ ಇದು ಮುಂದುವರೆಯುತ್ತಾ ಬಂದಿದೆ. ಉತ್ತರದ ಗಂಗೆಯಂತೆ, ಅಮೆರಿಕಾದ ಗ್ರ್ಯಾಂಡ್ ಕೆನಲ್ ನದಿಯಂತೆ ಕಾವೇರಿ ನದಿಯೂ ವರ್ಷ ಪೂರ್ತಿ ತುಂಬಿ ಹರಿಯಲಿ ಎಂದು ಆಶಿಸಿದ ಅವರು, ಕಾವೇರಿ ಆರತಿ ಮಾಡುವಾಗ ನದಿಯನ್ನು ಅಶುಚಿಗೊಳಿಸುವುದಿಲ್ಲ ಎಂಬ ಸಂಕಲ್ಪ ಮಾಡಬೇಕು. ನದಿಯ ಪಾವಿತ್ರ್ಯತೆ ಕಾಪಾಡಬೇಕು. ಪ್ರಕೃತಿಯನ್ನು ನಾಶ ಮಾಡಬಾರದು. ಪವಿತ್ರ ಭಾವನೆ ಎಲ್ಲರಲ್ಲೂ ಇರಲಿ ಎಂದು ಹೇಳಿದರು.
ಸಿದ್ದಲಿಂಗಸ್ವಾಮೀಜಿ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡರು, ಮಾಜಿ ಶಾಸಕಿ ವಿಜಯಲಕ್ಷ್ಮೀ ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ, ಕಾವೇರಿ ನೀರಾವರಿ ನಿಗಮದ ಮಹೇಶ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.