ಜಿಲ್ಲೆ

ಕಾರಿಂಜೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ವೈಭವ

ಸೌಮ್ಯ ಆರ್

ಬಂಟ್ವಾಳ: ಭೂಕೈಲಾಸ ಪ್ರತೀತಿಯ ಬಂಟ್ವಾಳ ತಾಲೂಕು ಕಾವಳಮೂಡೂರು ಗ್ರಾಮದ ಕಾರಿಂಜ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಬುಧವಾರ ಮಹಾಶಿವರಾತ್ರಿ ಮತ್ತು ಜಾತ್ರೋತ್ಸವ ಪ್ರಯುಕ್ತ ಹರಕೆ ತುಲಾಭಾರ ಸೇವೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಕ್ಷೇತ್ರದ ಅರ್ಚಕರಾದ ಮಿಥುನ್ ರಾಜ್ ನಾವಡ ಮತ್ತು ಜಯಶಂಕರ ಉಪಾಧ್ಯಾಯ ಸಹಕಾರದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.

ಸಂಜೆ ಶ್ರೀ ದುರ್ಗಾ ಸನ್ನಿಧಿಯಲ್ಲಿ ಉತ್ಸವ, ಕಾರಿಂಜೇಶ್ವರ ಸನ್ನಿಧಿಯಲ್ಲಿ ತುಲಾಭಾರ ಸೇವೆ, ಏಕಾದಶ ರುದ್ರಾಭಿಷೇಕ, ರಂಗಪೂಜೆ ನಡೆಯಿತು. ಸಾವಿರಾರು ಭಕ್ತರು ಮಹಾಶಿವರಾತ್ರಿ ಜಾಗರಣೆಯಲ್ಲಿ ಸಂಭ್ರಮದಿಂದ ಪಾಲ್ಗೊಂಡರು. ಮಧ್ಯಾಹ್ನದಿಂದ ಅನ್ನ ಸಂತರ್ಪಣೆ ನಡೆಯಿತು. ವಿವಿಧ ಸಂಘ ಸಂಸ್ಥೆಗಳ ಸ್ವಯಂಸೇವಕರು ಕಾರ್ಯ ನಿರ್ವಹಿಸಿದ್ದರು.

ಪಾರ್ವತಿ ದೇವಿಗೆ ದಾನಿಗಳು ಕೊಡಮಾಡಿದ 5 ಲಕ್ಷ ರೂ. ಮೌಲ್ಯದ ಹವಳ ಖಚಿತ ಸ್ವರ್ಣ ಕಂಠಿಹಾರ ಸಮರ್ಪಿಸಲಾಯಿತು. ಶ್ರೀ ಕಾರಿಂಜೇಶ್ವರ ಕ್ಷೇತ್ರ ಸಂರಕ್ಷಣಾ ಸಮಿತಿ ವತಿಯಿಂದ ಶಿವಮಾಲಾ ಧಾರಣೆ ಹಾಗೂ ಕೋಟಿ ಶಿವಪಂಚಾಕ್ಷರಿ ಪಠಣ ನಡೆಯಿತು. ಭಕ್ತಾದಿಗಳು ಶಿವಮಾಲೆ ಧರಿಸಿ ಓಂ ನಮಃ ಶಿವಾಯ ನಾಮಜಪದಲ್ಲಿ ಪಾಲ್ಗೊಂಡರು.

ಆಡಳಿತಾಧಿಕಾರಿ ಸಚಿನ್ ಕುಮಾರ್, ಬ್ರಹ್ಮಕುಮಾರಿಯರ ಈಶ್ವರೀಯ ವಿಶ್ವವಿದ್ಯಾಲಯದ ಶಾಂತಾ, ವ್ಯವಸ್ಥಾಪನ ಸಮಿತಿ ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಪುಳಿಮಜಲು, ಗ್ರಾಮಸ್ಥರು, ಭಕ್ತಾಧಿಗಳು, ಮತ್ತಿತರರು ಉಪಸ್ಥಿತರಿದ್ದರು.