ವಿಜಯವಾಣಿ ಸುದ್ದಿಜಾಲ ಧಾರವಾಡ
ಸ್ಥಾನಿಕ ಸಮಾನ ಮನಸ್ಸುಗಳು 49 ವರ್ಷಗಳ ಕಾಲ ಶಿವಸ್ಫೂರ್ತಿ ಮಹಾಶಿವರಾತ್ರಿ ಸಂಗೀತೋತ್ಸವ ಹಾಗೂ ಸಾಧಕ ಶಿವ ಸಮ್ಮಾನ ಪ್ರಶಸ್ತಿ ಪ್ರದಾನ ಮಾಡುತ್ತಿರುವ ಕಾರ್ಯ ಮಾದರಿಯಾಗಿದೆ ಎಂದು ಗಾಯಕ ಪಂ. ವೆಂಕಟೇಶಕುಮಾರ ಹೇಳಿದರು.
ನಗರದ ಮಂಗಳವಾರ ಪೇಟೆ ಮುದಿಮಾರುತಿ ದೇವಸ್ಥಾನದಲ್ಲಿ ಶಿವರಾತ್ರಿ ನಿಮಿತ್ತ ಇತ್ತೀಚೆಗೆ ಏರ್ಪಡಿಸಿದ್ದ ಅಹೋರಾತ್ರಿ ಸಂಗೀತೋತ್ಸವದಲ್ಲಿ ಸಾಧಕ ಶಿವ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ನಿರಂತರವಾಗಿ ನಡೆಯುತ್ತಿರುವ ಇಂತಹ ಸಮಾರಂಭಗಳ ಮೂಲಕ ಜನರಲ್ಲಿ ಸಾತ್ವಿಕತೆ ಮತ್ತು ಸಂಸ್ಕಾರ ಬೆಳೆಯುತ್ತದೆ. ಸಂಗೀತದ ಮುಂದೆ ನಾವೆಲ್ಲರೂ ಸಣ್ಣವರು. 49 ವರ್ಷ ಪೂರೈಸಿರುವ ಈ ಕಾರ್ಯಕ್ರಮ ಶತಮಾನೋತ್ಸವ ಕಾಣಲಿ ಎಂದು ಹಾರೈಸಿದರು.
ಪಂ. ವೆಂಕಟೇಶ ಕುಮಾರ ಅವರೊಂದಿಗೆ ಹಿರಿಯ ಸಿತಾರ ವಾದಕ ಪಂ. ಮಲ್ಲಿಕಾರ್ಜುನ ತರ್ಲಘಟ್ಟಿ, ವೆಂಕಟೇಶ ಅಲ್ಕೋಡ ಅವರಿಗೆ ಸಾಧಕ ಶಿವ ಪ್ರಶಸ್ತಿ, ಡಾ. ಸೌಭಾಗ್ಯ ಕುಲಕರ್ಣಿ ಹಾಗೂ ಶಿರೀಷ ಜೋಶಿ ಅವರಿಗೆ ಕಲಾ ಪೋಷಕ ಸಾಧಕ ಶಿವ ಹಾಗೂ ವೀಣಾ ಮಠ, ರೇಷ್ಮಾ ಭಟ್ ಮತ್ತು ರುದ್ರೇಶ ಭಜಂತ್ರಿ ಅವರಿಗೆ ಯುವ ಸಾಧಕ ಶಿವ ಸಮ್ಮಾನ ಪುರಸ್ಕಾರ ನೀಡಿ ಗೌರವಿಸಲಾಯಿತು.
ಇದಕ್ಕೂ ಪೂರ್ವದಲ್ಲಿ ಗುರುರಾಜ ಭಜನಾ ಮಂಡಳಿ, ಅನನ್ಯ ಪಾಮಡಿ, ಪ್ರಾಚಿ ಮರಾಠೆ ಅವರ ಭಕ್ತಿ ಸಂಗೀತ ಜರುಗಿತು. ನಾದ ಶಿವ ಸಂಗೀತ ವಿದ್ಯಾಲಯದ ಮಕ್ಕಳು, ಕಲಕೇರಿ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳ ಸಂಗೀತ ಮನಸೊರೆಗೊಂಡಿತು. ನಂತರ ಪ್ರಸಾದ ಸುತಾರ, ಪವನಕುಮಾರ ಬಡಿಗೇರ ದಾಸವಾಣಿ, ಅಭಂಗ ಗಾಯನ ನಡೆಯಿತು.
ಹಾಮೋರ್ನಿಯಂನಲ್ಲಿ ಬಸು ಹಿರೇಮಠ, ವಿನೋದ ಪಾಟೀಲ, ರಮೇಶ ಭಟ್ ಹೊಳೆಆಲೂರ ಹಾಗೂ ತಬಲಾದಲ್ಲಿ ವಾದಿರಾಜ ದಂಡಾಪುರ, ಶ್ರೀಧರ ಮಾಂಡ್ರೆ, ಶ್ರೀಹರಿ ದಿಗ್ಗಾವಿ, ವಿಜಯಕುಮಾರ ಸುತಾರ, ದಯಾನಂದ ಸುತಾರ, ಬಸವನಗೌಡ ಪಾಟೀಲ, ದಾಮೋದರ ಪಾಮಡಿ, ವಿಕ್ರಮ ಮನ್ನಾರಿ, ಸಾಥ್ ನೀಡಿದರು.
ಕಲಾವಿದ ವೀರಣ್ಣ ಪತ್ತಾರ, ಡಾ. ಶಶಿಧರ ನರೇಂದ್ರ ಮಾತನಾಡಿದರು. ಸುಖದ ಜೋಷಿ, ಲಲಿತ ಭಂಡಾರಿ, ಶಿರೀಷ ಕುಲಕರ್ಣಿ, ರವೀಂದ್ರ ಶಿರೋಳಕರ, ಗೋಪಾಲ ನಾಯರ, ಪ್ರಕಾಶ ಬಾಳಿಕಾಯಿ, ರಾಜು ಕುಲಕರ್ಣಿ, ಶಂಕರ ಮಂಗಳಗಟ್ಟಿ, ಡಾ. ವೀಣಾ ಸವದತ್ತಿ, ಸೋಮೇಶ ಪಟ್ಟಣಕೋಡಿ, ಮಧುಕೇಶ್ವರ ಭಟ್ ಜೋಷಿ, ನವೀನ ಶಿರೋಳಕರ, ಅರ್ಚನಾ ಸುತಾರ, ಇತರರು ಇದ್ದರು.