ಜಿಲ್ಲೆ

ಪಾಲಿಕೊಪ್ಪದಲ್ಲಿ ಕಂಗೊಳಿಸುತ್ತಿದೆ ಭವ್ಯ ಶ್ರೀ ಶಿವಶಕ್ತಿಧಾಮ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ದೇವಾಲಯವೇ ಆಕರ್ಷಣೆ: ಶಿವಶಕ್ತಿಧಾಮವು ಬಹಳಷ್ಟು ಆಕರ್ಷಣೆಯಿಂದ ಕೂಡಿದೆ. ಗರ್ಭಗುಡಿಯಲ್ಲಿ ಆನಂದೇಶ್ವರನ ವಿಗ್ರಹ ಪ್ರತಿಷ್ಠಾಪಿಸಲಾಗಿದೆ. ಮುಂದಿನ ಮಹಾಮಂಟಪದಲ್ಲಿ ನಂದಿ ವಿಗ್ರಹ ಪ್ರತಿಷ್ಠಾಪಿಸಲಾಗಿದೆ. ಗರ್ಭಗುಡಿ ಮುಂದೆ ದ್ವಾರಪಾಲಕರು ಇದ್ದಾರೆ. ಅದರ ಬಳಿ ಚಂಡಿಕೇಶ್ವರ ದೇವಸ್ಥಾನವಿದೆ. ನಂತರ ಜ್ಞಾನಾಂಬಿಕೆ ದೇವಾಲಯ ನಿರ್ವಿುಸಲಾಗಿದೆ. ಆನಂದೇಶ್ವರ ದೇವಾಲಯದ ಬಲಕ್ಕೆ ವಿಜಯ ಗಣಪತಿ ದೇವಸ್ಥಾನವಿದ್ದು, ಅದರ ಮುಂದೆ ಹೋಮಕುಂಡ ನಿರ್ವಿುಸಿದ್ದು, ಹೋಮ-ಹವನ ಕೈಂಕರ್ಯ ನಡೆಸಲು ಯೋಗ್ಯ ಸ್ಥಳವಾಗಿದೆ. ಶನೈಶ್ಚರ, ನವಗ್ರಹ ಹಾಗೂ ಕಾಳಭೈರವ ದೇವರ ದರ್ಶನವೂ ಭಕ್ತರಿಗೆ ಸಿಗಲಿದೆ. ಒಂದೇ ಸುತ್ತು ಹಾಕಿದರೆ ಇಷ್ಟೆಲ್ಲ ದೇವಸ್ಥಾನಗಳನ್ನು ನೋಡಿ ಪಾಪ ಕಳೆದು ಪುಣ್ಯ ಪ್ರಾಪ್ತಿ ಮಾಡಿಕೊಳ್ಳಲು ಪ್ರಶಸ್ತ ಸ್ಥಳವಾಗಿದೆ ಎಂಬುದು ಭಕ್ತರ ಅಂಬೋಣ.

ಸನಾತನ ಹಿಂದು ಧರ್ಮದಲ್ಲಿ ದೇವಸ್ಥಾನಗಳಿಗೆ ಇರುವ ಪ್ರಾಮುಖ್ಯ ಅಪಾರ. ಅವು ನಾಡಿನ ಶಕ್ತಿಕೇಂದ್ರಗಳಿದ್ದಂತೆ. ನಂಬಿಕೆಯ ತಳಹದಿಯ ಮೇಲೆ ನಿರ್ವಣವಾಗುವ ದೇಗುಲಗಳು, ಮನಸಿನ ದುಗುಡಗಳನ್ನು ದೂರಮಾಡಿ ನವ ಚೈತನ್ಯ ತುಂಬುವ ಧಾರ್ವಿುಕ ಶ್ರದ್ಧಾ ಕೇಂದ್ರಗಳು. ಉತ್ತರದ ಅಯೋಧ್ಯೆಯಲ್ಲಿ ಅರಳಿನಿಂತ ರಾಮಮಂದಿರದಂತೆ ಹುಬ್ಬಳ್ಳಿ ತಾಲೂಕಿನ ಪಾಲಿಕೊಪ್ಪ ಬಳಿ ಬೃಹತ್ ಶಿವಶಕ್ತಿಧಾಮ ತಲೆ ಎತ್ತಿನಿಂತಿದೆ. ಹಿಂದು ಧರ್ಮದ ಹಿರಿಮೆ-ಗರಿಮೆಯನ್ನು ಎತ್ತಿ ಹಿಡಿಯುವ ಶ್ರೀ ಕ್ಷೇತ್ರವಾಗಿ ಕಂಗೊಳಿಸುತ್ತಿದೆ. ಹಲವಾರು ಸಂತ-ಶರಣು ಆಗಿಹೋಗಿರುವ ಈ ನೆಲದಲ್ಲಿ ಭಕ್ತಿಯ ಸುಧೆ ಹರಿಸಲು ಆನಂದೇಶ್ವರ ದೇವಾಲಯ ಸಜ್ಜುಗೊಂಡಿದೆ.

ಪ್ರಸಿದ್ಧ ಸಿದ್ಧಾರೂಢ ಮಠ, ಮೂರುಸಾವಿರ ಮಠ, ಶಿರೂರ ಪಾರ್ಕ್​ನ ತದ್ರೂಪಿ ಅಯ್ಯಪ್ಪಸ್ವಾಮಿ ಮಂದಿರ, ಜೈನ ಮಂದಿರಗಳು, ವರೂರಿನ ನವಗ್ರಹ ತೀರ್ಥ, ಐತಿಹಾಸಿಕ ಉಣಕಲ್ಲ ಚಂದ್ರಮೌಳೇಶ್ವರ ದೇವಸ್ಥಾನ ಹೀಗೆ ಐತಿಹಾಸಿಕ ಹಾಗೂ ನವ್ಯ ಹಲವು ಧಾರ್ವಿುಕ ಶ್ರದ್ಧಾ ಕೇಂದ್ರಗಳಿಂದ ಹೆಸರುವಾಸಿಯಾಗಿರುವ ಹುಬ್ಬಳ್ಳಿ -ಧಾರವಾಡ, ಇದೀಗ ಮತ್ತೊಂದು ಭವ್ಯ ಮಂದಿರದ ಮೂಲಕ ಭಕ್ತರ ಸುಕ್ಷೇತ್ರವಾಗಿ ಹೊರಹೊಮ್ಮುತ್ತಿದೆ.

ತಾಲೂಕಿನ ಪಾಲಿಕೊಪ್ಪ ಬಳಿ ಪುಣೆ-ಬೆಂಗಳೂರು ರಸ್ತೆಯಲ್ಲಿ ನಿರ್ವಣಗೊಂಡಿರುವ ಶ್ರೀ ಶಿವಶಕ್ತಿಧಾಮವು ಭಕ್ತಗಣವನ್ನು ಕೈಬೀಸಿ ಕರೆಯುತ್ತಿದೆ. ಆಕರ್ಷಕ ದೇಗುಲ, ವಿಶಾಲ ದೇವಸ್ಥಾನದ ಆವರಣ ಕಣ್ಮನ ಸೆಳೆಯುತ್ತಿವೆ. ಶಿವಾ ಎಂದರೆ ಸರ್ವ ಭಕ್ತರ ಆರಾಧ್ಯದೈವ. ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಮಹಾದೇವನಾಗಿದ್ದಾನೆ. ಅಂತಹ ಆನಂದೇಶ್ವರನ ಭವ್ಯ ಮಂದಿರ ಇದೀಗ ಹುಬ್ಬಳ್ಳಿ ಸಮೀಪದಲ್ಲಿ ನಿರ್ಮಾಣ ಮಾಡಿರುವುದು ಜನರಿಗೆ ಹೊಸ ಭಕ್ತಿ- ಶ್ರದ್ಧೆಯ ತಾಣವಾಗಿದೆ. ಸಂಪೂರ್ಣ ಶಿಲೆಯಲ್ಲಿ ನಿರ್ವಿುಸಿದ ಇದರ ವಿಶೇಷ ಶೈಲಿಯು ನೋಡುಗರನ್ನು ತನ್ನತ್ತ ಆಕರ್ಷಿಸುವಂತಿದೆ.

ವಿಶಾಲವಾದ ದೇವಸ್ಥಾನ ಆವರಣದಲ್ಲಿ ಆನಂದೇಶ್ವರ, ವಿಜಯ ಗಣಪತಿ, ಜ್ಞಾನಾಂಬಿಕೆ, ಶನೈಶ್ಚರ ಹೀಗೆ ವಿವಿಧ ದೇಗುಲಗಳು ಇವೆ. ಒಂದೇ ಜಾಗದಲ್ಲಿ ಹಲವು ದೇವರನ್ನು ಕಾಣುವ ಮೂಲಕ ಭಕ್ತಿ ಸಮರ್ಪಿಸಿ ಕೃತಾರ್ಥರಾಗುವ ಅವಕಾಶ ಇಲ್ಲಿ ಸಿಗಲಿದೆ. ಇಲ್ಲಿ ನಿರ್ವಣವಾದ ಪ್ರತಿಯೊಂದು ದೇವಸ್ಥಾನವೂ ವಿಶಿಷ್ಟ ಹಾಗೂ ಪರಂಪರೆಯನ್ನು ಸಾರುವಂತಿವೆ. ಶಿವಶಕ್ತಿಧಾಮವನ್ನು ಆಗಮ ಶಿಲ್ಪ ಶಾಸ್ತ್ರದ ಪ್ರಕಾರ ಸಂರಚನೆ ಮಾಡಿ ನಿರ್ವಿುಸಲಾಗಿದೆ. ವಾಸ್ತುವಿನ ಪ್ರಕಾರ ಹಾಗೂ ಯಾವ ಸ್ಥಾನ ಯಾವ ದೇವರಿಗೆ ಶ್ರೇಷ್ಠ ಎಂಬುದನ್ನು ಪರಿಶೀಲಿಸಿ ಪ್ರತಿಷ್ಠಾಪನೆ ಮಾಡಲಾಗಿದೆ. ಮುಖ್ಯವಾಗಿ ಶಿವನ ಮೂರ್ತಿಯನ್ನು ಪ್ರತಿಷ್ಠಾಪಿಸುವಾಗ ತಳಭಾಗದಲ್ಲಿ ಶಿವಲಿಂಗವು ಚೌಕ ಆಕಾರದಲ್ಲಿ ನಿರ್ವಿುಸಲಾಗಿದೆ. ಏಕಶಿಲೆಯ ಮೂರ್ತಿ ಇದಾಗಿದೆ. ಇಲ್ಲಿನ ಎಲ್ಲ ಮೂರ್ತಿಗಳನ್ನು ವಿಶಿಷ್ಟ ಪದ್ಧತಿಯಲ್ಲಿ ಕೆತ್ತಲಾಗಿದೆ. ಗರ್ಭಗೃಹ ಇದು ನಮ್ಮ ಶಿರ ಅಥವಾ ತಲೆ ಇದ್ದಂತೆ, ಮಹಾಮಂಟಪ, ಧ್ವಜಸ್ಥಂಭ, ರಾಜಗೋಪುರ ಎಲ್ಲವೂ ಅತ್ಯಂತ ಸುಂದರ ಹಾಗೂ ಆಕರ್ಷಕ ರೀತಿಯಲ್ಲಿ ಸಜ್ಜುಗೊಂಡಿವೆ.

ಪೀಠ ಹಾಗೂ ಮೂರ್ತಿಗಳಿಗೆ ಅಷ್ಟಬಂಧನ (ಎಂಟು ರಾಸಾಯನಿಕ, ಪಾರಂಪರಿಕ ಪದ್ಧತಿ) ಅಳವಡಿಸಲಾಗಿದೆ. ಈ ವಿಧಾನವು ದೇವರ ಮೂರ್ತಿ ಕಳೆಗಟ್ಟಲು ಮಹತ್ವದ್ದಾಗಿದೆ. ನಮ್ಮ ಪಾರಂಪರಿಕ ಧಾರ್ವಿುಕ ಶ್ರದ್ಧಾ ಕೇಂದ್ರಗಳು ಹೇಗಿರಬೇಕು ಎಂಬುದಕ್ಕೆ ಮಾದರಿ ಎಂಬಂತೆ ಶಿವಶಕ್ತಿಧಾಮವನ್ನು ನಿರ್ವಿುಸಲಾಗಿದೆ. ಪುರಾತನ ಅನೇಕ ದೇವಾಲಯಗಳಲ್ಲಿ ಈಗಲೂ ಪುಷ್ಕರಣಿ, ನೀರಿನ ಹೊಂಡಗಳು ಕಾಣಸಿಗುತ್ತವೆ. ಅಂತಹ ಪುಷ್ಕರಣಿ ಇಲ್ಲಿಯೂ ಇದೆ. ಅತ್ಯಂತ ಶುದ್ಧ ಜಲ ಇಲ್ಲಿ ಸಂಗ್ರಹವಾಗಿದೆ.

ವಾಣಿಜ್ಯನಗರಿ ಹುಬ್ಬಳ್ಳಿಯಿಂದ ಪಿ.ಬಿ. ರಸ್ತೆ ಮೂಲಕ ಹಾವೇರಿಯತ್ತ ಹೋಗುವಾಗ ಹೊರವಲಯದ ಪಾಲಿಕೊಪ್ಪ ಬಳಿ ಬಲ ಬದಿಯಲ್ಲಿ ವಿಶಾಲ ಹಾಗೂ ಭವ್ಯ ಮಂದಿರ ಗೋಚರಿಸುತ್ತದೆ. ಅದುವೇ ಶ್ರೀ ಶಿವಶಕ್ತಿಧಾಮ. ಆರಾಧನಾ ಟ್ರಸ್ಟ್ ವತಿಯಿಂದ ಆರೂವರೆ ಎಕರೆ ಜಮೀನಿನಲ್ಲಿ ಬೃಹತ್ ದೇವಾಲಯ ನಿರ್ವಿುಸಲಾಗಿದ್ದು, ಭಕ್ತರ ತನು-ಮನಗಳನ್ನು ಸಂತೈಸುವ ತಾಣವಾಗಿದೆ. ಅತ್ಯಂತ ಸುಂದರ ಹಾಗೂ ಹಸಿರು ಉದ್ಯಾನದ ಮಧ್ಯ ತಲೆ ಎತ್ತಿರುವ ಮಂದಿರ ಆಹ್ಲಾದಕರ ವಾತಾವರಣದಲ್ಲಿ ಭಕ್ತರಿಗೆ ತಂಪೆರೆಯುತ್ತದೆ. ದಕ್ಷಿಣ ಭಾರತದ ದ್ರಾವಿಡ ಶೈಲಿಯಲ್ಲಿ ನಿರ್ವಣವಾಗಿರುವ ಈ ದೇವಸ್ಥಾನಗಳ ಪ್ರಾಂಗಣದಲ್ಲಿ ಆನಂದೇಶ್ವರ ದೇವಾಲಯ, ಜ್ಞಾನಾಂಬಿಕೆ ದೇವಾಲಯ, ವಿಜಯ ಗಣಪತಿ, ಶನೈಶ್ಚರ, ನವಗ್ರಹ, ಕಾಳಭೈರವ ದೇವಸ್ಥಾನಗಳಿವೆ. ಆವರಣದಲ್ಲಿ ಒಂದು ಸುತ್ತು ಹಾಕಿದರೆ ಎಲ್ಲ ದೇವರ ದರ್ಶನ ಪಡೆದು ಪುನೀತರಾಗುವ ತಾಣ ಇದಾಗಿದೆ. ಈ ದೇವಾಲಯ ಒಳಗೆ ಪ್ರವೇಶಿಸುವ ಮುನ್ನ ಮಹಾದ್ವಾರ ಕತ್ತು ಮೇಲೆತ್ತಿ ನೋಡುವಂತೆ ಮಾಡುತ್ತದೆ.

ಇದನ್ನು ನೋಡುತ್ತಿದ್ದಂತೆ ಮನದಲ್ಲಿ ಭಕ್ತಿಯ ಭಾವ ಮೂಡುತ್ತದೆ. ಹಾಗೆಯೇ ಒಳ ಪ್ರವೇಶ ಪಡೆಯುತ್ತಿದ್ದಂತೆಯೇ ರಥಬೀದಿ, ರಾಜಗೋಪುರ, ಹೋಮಕುಂಡ ಕಣ್ಣಿಗೆ ಬೀಳುತ್ತವೆ. ಶಿವನನ್ನು ಕಣ್ತುಂಬಿಕೊಳ್ಳಲು ಕುಳಿತರೆ ಸಾಕು ಮನಸು ಹೂವಿನಂತೆ ಅರಳಲು ಆರಂಭಿಸುತ್ತದೆ. ನಂತರ ಪಾರ್ವತಿದೇವಿ, ಗಣೇಶನ ಮೂರ್ತಿಯ ದರ್ಶನ ಮಾಡಿದಾಗ ಮನಸು ಹಗುರವಾಗುತ್ತದೆ. ಒಂದು ಸುತ್ತು ಹಾಕುವವರೆಗೆ ಇಳಿ ಸಂಜೆ ಆಗುವಷ್ಟು ಅತ್ಯದ್ಭುತ ಕಲ್ಪನೆಯೊಂದಿಗೆ ಈ ದೇವಸ್ಥಾನ ನಿರ್ವಿುಸಲಾಗಿದೆ. ತಮಿಳುನಾಡಿನ ಕೆ. ಸ್ವಾಮಿನಾಥನ್ ಸ್ಥಪತಿ (ಆರ್ಕಿಟೆಕ್ಟ್) ಇದರ ಉಸ್ತುವಾರಿ ವಹಿಸಿದ್ದು, ಮಣಿ ಸೂಪರ್​ವೈಸರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಸತತ 4 ವರ್ಷದಿಂದ ದೇವಸ್ಥಾನ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಮಧುರೈನ 50 ಶಿಲ್ಪಿಗಳು ನಿತ್ಯ ಕಾಯಕದಲ್ಲಿ ತೊಡಗಿದ್ದರು. ದೊಡ್ಡಬಳ್ಳಾಪುರದಿಂದ ಕಲ್ಲುಗಳನ್ನು ತರಿಸಿ, ಬೃಹತ್ ದೇವಾಲಯ ಕಟ್ಟಡಗಳನ್ನು ನಿರ್ವಿುಸಲಾಗಿದೆ. ತಮಿಳುನಾಡಿನ ವಾಲಜಾಬಾದ್​ನಿಂದ ಕಪ್ಪು ಶಿಲೆಗಳನ್ನು ತರಿಸಿ, ವಿಗ್ರಹ ಕೆತ್ತಲಾಗಿದೆ. ಕವಚ, ಕಳಶ, ಪ್ರಭಾವಳಿಗಳನ್ನು ಕುಂಭಕೋಣಂನಿಂದ ತರಿಸಲಾಗಿದೆ.