ಜಿಲ್ಲೆ

ಸ್ಥಳಿಯ ಸಂಸ್ಥೆ ಚುನಾವಣೆಯಲ್ಲಿ ಶಿವಸೇನೆ ಸ್ಪರ್ಧೆ

ಗೋಪಾಲಕೃಷ್ಣ ಪಾದೂರ್

ಉಡುಪಿ: ರಾಜ್ಯದಲ್ಲಿ ಮುಂದಿನ ಗ್ರಾಪಂ, ಜಿಪಂ, ತಾಪಂ, ನಗರಸಭೆ, ಪುರಸಭೆ ಮತ್ತು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಶಿವಸೇನೆ (ಶಿಂಧೆ ಬಣ) ಸ್ಪರ್ಧಿಸಲಿದೆ ಎಂದು ರಾಜ್ಯಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಶಿವಸೇನೆ ಎನ್​ಡಿಎ ಮೈತ್ರಿಕೂಟದ ಭಾಗವಾಗಿದ್ದು, ರಾಷ್ಟ್ರಾಧ್ಯಕ್ಷ ಏಕನಾಥ ಶಿಂಧೆಯವರು ಒಪ್ಪಿಗೆ ಸೂಚಿಸಿದರೆ ರಾಜ್ಯದಲ್ಲೂ ಮೈತ್ರಿ ಮುಂದುವರಿಸುವುದಾಗಿ ತಿಳಿಸಿದರು.

ರಾಜ್ಯದ ನೆಲ, ಜಲ ಭಾಷೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಬೆಳಗಾವಿ ವಿವಾದ ಸುಪ್ರೀಂಕೋರ್ಟ್​ನಲ್ಲಿದ್ದು, ನ್ಯಾಯಾಲಾಯದ ತೀರ್ಪಿಗೆ ನಾವು ಬದ್ಧ. ಕನ್ನಡಿಗರು ಮತ್ತು ಹಿಂದಿ ಭಾಷಿಕರ ಮೇಲೆ ದಾಳಿ ಮಾಡಿದ್ದು ಉದ್ಧವ ಠಾಕ್ರೆ ಶಿವಸೇನಾ ಬಣ. ಇದಕ್ಕೂ ನಮಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಹಿಂದೂ ವಿರೋಧಿ ನಿಲುವು ತಳೆದಿದ್ದು, ಮುಸ್ಲಿಂ ತುಷ್ಟೀಕರಣದಿಂದ ಕಾನೂನು ಸುವ್ಯವಸ್ಥೆ ಹಳ್ಳಹಿಡಿದಿದೆ. ಮಿಲಾದ್​ ಮೆರವಣಿಗೆಯಲ್ಲಿ ಪ್ಯಾಲಿಸ್ತೇನ್​ ಧ್ವಜ ಹಾರಾಟ, ಪಾಕಿಸ್ತಾನ್​ ಪರ ಘೋಷಣೆ, ಗಣಪತಿ ಉತ್ಸವದ ಮೇಲೆ ಕಲ್ಲೂ ತೂರಾಟ ನಡೆಸಿದವರ ವಿರುದ್ಧ ಯುಎಪಿಎ ಕಾಯ್ದೆ ದಾಖಲಿಸಬೇಕು. ಗಲಭೆ ಕಾರಣಕ್ಕೆ ಬಂಧಿತರಾದವರ ಮನೆಗೆ ತೆರಳಿ ಜಮೀರ್​ ನೆರವು ನೀಡುತ್ತಿರುವುದು ಅಪರಾಧ್ಯ ಕೃತ್ಯಕ್ಕೆ ಬೆಂಬಲ ನೀಡಿದಂತಾಗುತ್ತದೆ. ಹೀಗಾಗಿ ಅವರ ಮೇಲೂ ಕಾನೂನುಕ್ರಮಕೈಗೊಳ್ಳಬೇಕು ಎಎಂದು ಆಗ್ರಹಿಸಿದರು.

ಈಗಲೇ ಮತಾಂತರವಾಗಲಿ

ಭದ್ರಾವತಿ ಶಾಸಕ ಸಂಗಮೇಶ ಅವರು ರಾಜಕೀಯ ತೆವಲಿಗೆ ಮುಂದಿನ ಜನ್ಮದಲ್ಲಿ ಇಸ್ಲಾಂ ಧರ್ಮದಲ್ಲಿ ಹುಟ್ಟುತ್ತೇನೆ ಎಂದಿದ್ದಾರೆ. ಇದರಿಂದ ಪ್ರಚೋದನೆಗೆ ಒಳಗಾದವರೇ ಪಾಕ್​ ಪರ ಘೋಷಣೆ ಹಾಕಿದ್ದಾರೆ. ಅಷ್ಟಕ್ಕೂ ಸಂಗಮೇಶ ಅವರು ಮುಂದಿನ ಜನ್ಮದವರೆಗೆ ಏಕೆ ಕಾಯಬೇಕು. ಈಗಲೇ ಮಸೀದಿಗೆ ಹೋಗಿ ಮತಾಂತರವಾಗಬಹುದು. ಇದರಿಂದ ಅವರ ಮನಸ್ಸಿಗೂ ನೆಮ್ಮದಿ ಸಿಗುತ್ತದೆ ಎಂದು ವ್ಯಂಗ್ಯವಾಡಿದರು.

ರಾಜ್ಯ ಉಪಾಧ್ಯಕ್ಷ ಆನಂದ ಅಡ್ಯಾರ್​, ಪ್ರಧಾನ ಕಾರ್ಯದರ್ಶಿ ಗಂಗಾಧರ ಕುಲಕರ್ಣಿ, ಮುಖಂಡರಾದ ಮಹಾಲಿಂಗಣ್ಣ ಗುಂಜಗಾವಿ, ಅಮರ್​ನಾಥ್​, ಭಾಸ್ಕರ್​, ಸುದರ್ಶನ್​ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.