ಜಿಲ್ಲೆ

ವಾಣಿಜ್ಯನಗರಿಯಲ್ಲಿ ಶಿವರಾತ್ರಿ ಸಂಭ್ರಮ, ಹರ್ ಹರ್ ಮಹಾದೇವ ಘೋಷಣೆ

Dharwada - Basavaraj Idli

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಬುಧವಾರ ಮಹಾಶಿವರಾತ್ರಿ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಭ್ರಮ, ಸಡಗರದಿಂದ ನಡೆದವು.

ಶಿವಭಕ್ತರು ಬೆಳಗ್ಗೆಯಿಂದ ಉಪವಾಸ ವ್ರತ ಆಚರಣೆ ಮಾಡಿದರು. ಶಿವದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಶಿವಲಿಂಗ ದರ್ಶನ ಪಡೆದರು.

ನಗರದ ಪ್ರಸಿದ್ಧ ಶ್ರೀ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿದ ಸಾವಿರಾರು ಭಕ್ತರು ಉಭಯ ಶ್ರೀಗಳ ಗದ್ದುಗೆ ದರ್ಶನ ಮಾಡಿದರು.

ನಗರದ ಉಣಕಲ್ಲ ನೃಪತುಂಗ ಬೆಟ್ಟ ಬಳಿಯ ಕಾಶಿ ವಿಶ್ವನಾಥ ದೇವಸ್ಥಾನ, ಉಣಕಲ್ಲ ರಾಮಲಿಂಗೇಶ್ವರ ದೇವಸ್ಥಾನ, ಶ್ರೀ ಚಂದ್ರಮೌಳೇಶ್ವರ ದೇಗುಲ, ಸ್ಟೇಶನ್ ರಸ್ತೆಯಲ್ಲಿರುವ ಈಶ್ವರ ಗುಡಿ, ಗೋಕುಲ ರಸ್ತೆ ಶಿವಪುರ ಕಾಲನಿಯ ಬೃಹತ್ ಶಿವನ ಮೂರ್ತಿ ಇರುವ ದೇವಸ್ಥಾನ, ನವನಗರದ ಈಶ್ವರ ದೇವಸ್ಥಾನ ಹೀಗೆ ಎಲ್ಲ ಕಡೆಗಳಲ್ಲಿ ಶಿವನಾಮ ಸ್ಮರಣೆ ನಡೆಯಿತು.

ಇಷ್ಟದೇವ ಶಿವ ಪರಮಾತ್ಮನ ಆರಾಧನೆ ವ್ರತ ಕೈಗೊಂಡು ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥನೆ ಸಲ್ಲಿಸಿದರು.

ನಗರದ ಎಲ್ಲ ಕಡೆ ಭೋಲೆನಾಥನ ಆರಾಧನೆ ನಡೆದು ವಾಣಿಜ್ಯ ನಗರಿ ಸಂಪೂರ್ಣ ಶಿವಮಯವಾಗಿತ್ತು. ಸತ್ಯಂ ಶಿವಂ ಸುಂದರಂ, ಹರ್ ಹರ್ ಮಹದೇವ, ಶಿವಾಯ ನಮಃ ಓಂ…. ಮುಂತಾದ ಹಾಡುಗಳು ಎಲ್ಲೆಡೆ ಅನುರಣಿಸಿದವು.

ಗಮನ ಸೆಳೆದ ಕಾಶಿ ಮಾದರಿ:
ಹುಬ್ಬಳ್ಳಿಯ ದೇಶಪಾಂಡೆ ನಗರದ ಜಿಮಖಾನಾ ಮೈದಾನದಲ್ಲಿ ನಿರ್ಮಿಸಲಾಗಿರುವ ಕಾಶಿ ವಿಶ್ವನಾಥ ಮಾದರಿಯ ಜ್ಯೋತಿರ್ಲಿಂಗ ಸಾವಿರಾರು ಜನರನ್ನು ಸೆಳೆಯಿತು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಸಾರಥ್ಯದಲ್ಲಿ ಅವರ ಆಶಯದಂತೆ ಕಾಶಿ ವಿಶ್ವನಾಥ ಮಾದರಿ ಶಿವಲಿಂಗ ಪ್ರತಿಷ್ಠಾಪಿಸಿ ಭಕ್ತರಿಗೆ ದರ್ಶನ ಭಾಗ್ಯ ಕರುಣಿಸಲಾಗಿತ್ತು.

ವಾರಾಣಸಿಯ ಗಂಗಾ ನದಿ ತಟದಲ್ಲಿರುವ ಶ್ರೀ ಕಾಶಿ ವಿಶ್ವೇಶ್ವರ ದೇಗುಲದಂತೆ ಇಲ್ಲಿಯೂ ದೇವಸ್ಥಾನ ನಿರ್ಮಿಸಲಾಗಿತ್ತು. ಇಲ್ಲಿ ಪ್ರತಿಷ್ಠಾಪಿಸಿದ ಜ್ಯೋತಿರ್ಲಿಂಗಕ್ಕೆ ಸಚಿವ ಪ್ರಲ್ಹಾದ ಜೋಶಿ ಅವರು ರುದ್ರಾಭಿಷೇಕ ನೆರವೇರಿಸಿದರು.

ಲೋಕಕಲ್ಯಾಣಾರ್ಥ ಶಿವಲಿಂಗಕ್ಕೆ ಪಂಚಾಮೃತ ಅಭಿಷೇಕ ನೆರವೇರಿಸಿ, ಬಿಲ್ವಪತ್ರೆ, ಹೂವಿನ ಹಾರ ಅಪಿರ್ಸಿ, ಕರ್ಪೂರದಾರತಿ ಬೆಳಗಿದರು.

ಮುಂಡಗೋಡ ಹಿರೇಮಠದ ಶ್ರೀ ರುದ್ರಮುನಿ ಸ್ವಾಮೀಜಿ ಅವರು ಮಂತ್ರೋಪದೇಶ ಸಹಿತ ರುದ್ರಾಭಿಷೇಕ ನೆರವೇರಿಸಿದರು. ನಂತರ ಪ್ರಸಾದ ಮತ್ತು ಪಂಚಮುಖಿ ರುದ್ರಾಕ್ಷಿ ವಿತರಿಸಲಾಯಿತು.