ಜಿಲ್ಲೆ

ಮಹಾಶಿವರಾತ್ರಿ ಪ್ರತಿಯೊಬ್ಬರ ಬಾಳಲ್ಲಿ ಜಾಗೃತಿಯ ರಾತ್ರಿಯಾಗಬೇಕು

ಸದೇಶ್ ಕಾರ್ಮಾಡ್

ಮೈಸೂರು: ಮಹಾಶಿವರಾತ್ರಿ ನಮ್ಮ ಬಾಳಿನಲ್ಲಿ ಜಾಗೃತಿ ರಾತ್ರಿಯಾಗಬೇಕು ಎಂದು ಬಸವಮಾರ್ಗ ಫೌಂಡೇಷನ್ ಸಂಸ್ಥಾಪಕ ಎಸ್. ಬಸವಣ್ಣ ಹೇಳಿದರು.

ಶಿವರಾತ್ರಿ ಹಬ್ಬದ ಜಾಗರಣೆ ಹಿನ್ನೆಲೆಯಲ್ಲಿ ಹೆಬ್ಬಾಳಿನಲ್ಲಿ ಇರುವ ಬಸವಮಾರ್ಗ ಫೌಂಡೇಶನ್‌ನಲ್ಲಿ ಬುಧವಾರ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಿವರಾತ್ರಿ ಆಚರಣೆಗೆ ಅನೇಕ ಹಿನ್ನೆಲೆಯಿದೆ. ಅನೇಕ ಕಥೆಗಳಿವೆ. ಕೈಲಾಸವಾಸಿ ಶಿವನಿಗೆ ಶಿವರಾತ್ರಿ ಅತ್ಯಂತ ಪ್ರಿಯವಾದ ದಿನವಾಗಿದೆ. ಶಿವರಾತ್ರಿಯಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹಿಸುತ್ತಾನೆ ಎನ್ನುತ್ತದೆ ಶಿವಪುರಾಣ. ಮಹಾ ಶಿವರಾತ್ರಿಯಂದು ಬಿಲ್ವಪತ್ರೆಯನ್ನು ಶಿವಲಿಂಗದ ಮೇಲಿಟ್ಟು ಪೂಜಿಸಿದರೆ, ಯಾಗ ಮಾಡಿದ ಫಲ ದೊರೆಯುತ್ತದೆ ಎಂದು ಹಿರಿಯರು ಹೇಳುತ್ತಾರೆ. ಅಲ್ಲದೆ, ಶಿವರಾತ್ರಿಯ ಆಚರಣೆಗೆ ವೈಜ್ಞಾನಿಕ ಕಾರಣಗಳೂ ಇವೆ. ಈ ದಿನ ರಾತ್ರಿಯಲ್ಲಿ ಎಚ್ಚರ ಇದ್ದು ಪೂಜೆ ಮಾಡುವುದರಿಂದ ಮನಸ್ಸು ಪ್ರಶಾಂತವಾಗಿ ಸನ್ಮಾನದ ಕಡೆಗೆ ಹೋಗುತ್ತದೆ ಎಂದು ತಿಳಿಸಿದರು.

ಶಿವನು ಪಾರ್ವತಿ ದೇವಿಯನ್ನು ವಿವಾಹವಾದ ದಿನವಾಗಿ ಶಿವರಾತ್ರಿಯೆಂದು ಹೇಳಲಾಗುತ್ತದೆ. ಅಲ್ಲದೆ, ದೇವತೆಗಳು ಹಾಗೂ ಅಸುರರ ನಡುವೆ ಸಮುದ್ರ ಮಂಥನ ನಡೆದು ವಿಷ ಉದ್ಭವವಾದಾಗ, ಅದನ್ನು ಶಿವ ಕುಡಿದ. ವಿಷ ಗಂಟಲೊಳಗಿಂದ ಇಳಿಯದಂತೆ ಪಾರ್ವತಿ ಇಡೀ ರಾತ್ರಿ ತಡೆದಳು ಎನ್ನುತ್ತದೆ ಶಿವಪುರಾಣದ ಇನ್ನೊಂದು ಮಹಿಮೆ. ಜತೆಗೆ, ಭಗೀರಥನ ತಪಸ್ಸಿಗೆ ಮೆಚ್ಚಿ ಇಳೆಗೆ ಇಳಿದು ಬಂದ ಗಂಗೆಯನ್ನು ಶಿವ ತನ್ನ ಜಡೆಯಲ್ಲಿ ತುಂಬಿಸಿಕೊಂಡಿದ್ದ. ಇದರಿಂದ ವಿಚಲಿತನಾದ ಭಗೀರಥ ಗಂಗೆಯನ್ನು ಭೂಮಿಗೆ ಹರಿಸುವಂತೆ ಶಿವನನ್ನು ಪ್ರಾರ್ಥಿಸಿದ. ಆತನ ಭಕ್ತಿಗೆ ಮೆಚ್ಚಿ ಶಿವ ಗಂಗೆಯನ್ನು ಹರಿಯಬಿಟ್ಟಿದ್ದು ಇದೇ ದಿನ ಎನ್ನುತ್ತದೆ ಪುರಾಣ. ಇನ್ನು, ಶಿವನ ಆದಿ ಮತ್ತು ಅಂತ್ಯ ಹುಡುಕಲು ಹೊರಟ ವಿಷ್ಣು ಹಾಗೂ ಬ್ರಹ್ಮನಿಗೆ, ಶಿವರಾತ್ರಿಯಂದು ಶಿವ ಲಿಂಗರೂಪಿಯಾಗಿ ದರ್ಶನ ನೀಡಿದ ಎಂಬುದು ಪ್ರತೀತಿ ಇದೆ ಎಂದರು.

ಬಸವಮಾರ್ಗ ಫೌಂಡೇಶನ್‌ನಲ್ಲಿ ಪ್ರತಿ ಹಬ್ಬ, ವಿಶೇಷ ದಿನವನ್ನು ಅದ್ದೂರಿಯಾಗಿ ಆಚರಿಸುತ್ತದೆ. ಆ ದಿನ ವಿಶೇಷ ಧಾರ್ಮಿಕ ಕಾರ್ಯಗಳನ್ನು ಆಯೋಜಿಸಿ ವ್ಯಸನಿಗಳ ಮನಃ ಪರಿವರ್ತನೆಗೆ ಸೂಕ್ತ ವೇದಿಕೆಯನ್ನು ಕಲ್ಪಿಸಿಕೊಡುತ್ತದೆ. ಶಿವರಾತ್ರಿಯ ಈ ದಿನವೂ ಕೂಡ ನಮ್ಮಲ್ಮಿ ಶಿವನಿಗೆ ವಿಶೇಷ ಪೂಜೆ ಮಾಡಲಾಗಿದೆ. ಕೈಗೆ ಕಂಕಣ ಕಟ್ಟಲಾಗಿದೆ. ವಿಭೂತಿ, ಬಿಲ್ವಪತ್ರೆಯನ್ನು ಪ್ರಸಾದ ರೂಪವಾಗಿ ನೀಡಲಾಗಿದೆ. ಅಗ್ನಿಹೋತ್ರ ಹೋಮ ಹಾಗೂ ಜ್ಯೋತಿರ್ ತ್ರಾಟಕ ಆಯೋಜಿಸಿ ಧಾರ್ಮಿಕ ಕಾರ್ಯ ಮಾಡಲಾಗಿದೆ. ಕೊನೆಗೆ ಮಹಾ ಮಂಗಳಾರತಿ ನೆರವೇರಿಸಿ ತೀರ್ಥ, ಪ್ರಸಾದವನ್ನು ನೀಡಲಾಗಿದೆ. ವ್ಯಸನಿಗಳು ಈ ರೀತಿಯ ಕಾರ್ಯಕ್ರಮಗಳನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಜೀವನದಲ್ಲಿ ಬದಲಾವಣೆ ಕಂಡುಕೊಳ್ಳಬೇಕು. ಆ ಮೂಲಕ ನಿಮ್ಮ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕ ಎಚ್.ಪಿ.ನವೀನ್ ಕುಮಾರ್, ಸಿಬ್ಬಂದಿ ಸಂಜಯ್ ಹಾಗೂ ಇತರರು ಇದ್ದರು.