ಕೋಲಾರ: ಕೋವಿಡ್ ನಿಯಂತ್ರಣ ಸಂಬಂಧ ಪಿಪಿಇ ಕಿಟ್, ವೆಂಟಿಲೇಟರ್ ಇನ್ನಿತರ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ನಡೆದಿಲ್ಲ, ಆದರೂ ತನಿಖೆಗೆ ಸರ್ಕಾರ ಸಿದ್ಧವಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅಕ್ರಮ ನಡೆದಿಲ್ಲವೆಂದು ಸಂಬಂಧಿಸಿದ ಸಚಿವರೇ ಸ್ಪಷ್ಟಪಡಿಸಿದ್ದು, ಪ್ರತಿಪಕ್ಷಗಳು ವಿನಾಕಾರಣ ಆರೋಪ ಮಾಡುತ್ತಿವೆ ಎಂದರು.
ಜಗತ್ತಿನ ಬಲಿಷ್ಠ ರಾಷ್ಟ್ರಗಳಿಗೆ ಹೋಲಿಸಿದರೆ ಜನಸಂಖ್ಯೆ ಹೆಚ್ಚಿರುವ ಭಾರತದಲ್ಲಿ ಕರೊನಾದಿಂದ ಸಾವಿನ ಸಂಖ್ಯೆ 10,000 ದಾಟಿಲ್ಲ, 7 ಕೋಟಿ ಜನರಿರುವ ರಾಜ್ಯದಲ್ಲಿ ಸಾವಿನ ಸಂಖ್ಯೆ 400 ದಾಟಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಯಡಿಯೂರಪ್ಪ ಕರೊನಾ ಪರಿಸ್ಥಿತಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಎಂದರು.
ವೈದ್ಯರ ನಿಯೋಜನೆ: ರಾಜ್ಯದ ಇಎಸ್‌ಐ ಆಸ್ಪತ್ರೆಗಳಿಗೆ 141 ವೈದ್ಯರನ್ನು ನೇಮಿಸಿಕೊಳ್ಳಲಾಗಿದ್ದು, ವಾರದೊಳಗೆ ನಿಯೋಜಿಸಲಾಗುವುದು, ಹೊರಗುತ್ತಿಗೆಯಡಿ ಸಿ ಮತ್ತು ಡಿ ದರ್ಜೆಯ 278 ಸಿಬ್ಬಂದಿಯನ್ನು ಶೀಘ್ರ ನೇಮಕ ಮಾಡಿಕೊಳ್ಳಲಾಗುವುದು, ಕೆಜಿಎಫ್ ಆಸ್ಪತ್ರೆಯಲ್ಲೂ ಇಬ್ಬರು ವೈದ್ಯ ಸಿಬ್ಬಂದಿ ಕೊರತೆ ನೀಗಿಸಲಾಗುವುದು ಎಂದರು.
798 ಕೋಟಿ ರೂ. ವಿತರಣೆ: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೀಡಾಗಿರುವ ಕಟ್ಟಡ ಕಾರ್ಮಿಕರಿಗೆ 5000 ರೂ. ಪರಿಹಾರ ಧನವಾಗಿ ಈ ವೇಳೆಗಾಗಲೆ 15.72 ಲಕ್ಷ ಕಾರ್ಮಿಕರ ಖಾತೆಗೆ 798 ಕೋಟಿ ರೂ. ಜಮಾ ಮಾಡಲಾಗಿದೆ ಎಂದರು.
ಸಂಸದ ಎಸ್. ಮುನಿಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ತಾಲೂಕು ಅಧ್ಯಕ್ಷ ಸಿ.ಡಿ.ರಾಮಚಂದ್ರ, ನಗರಾಧ್ಯಕ್ಷ ತಿಮ್ಮರಾಯಪ್ಪ, ಪದಾಧಿಕಾರಿಗಳಾದ ವಾಸುದೇವ, ಗುರುನಾಥ್, ವಿಜಯಕುಮಾರ್, ಕೂಡಾ ಸದಸ್ಯರಾದ ಸತ್ಯನಾರಾಯಣ ರಾವ್, ಮಮತಾ, ಜಿಲ್ಲಾ ಉಪಾಧ್ಯಕ್ಷೆ ಅರುಣಮ್ಮ, ಯುವ ಮೋರ್ಚಾ ಅಧ್ಯಕ್ಷ ಬಾಲಾಜಿ, ಮಾಜಿ ನಗರಾಧ್ಯಕ್ಷ ಮಾಗೇರಿ ನಾರಾಯಣಸ್ವಾಮಿ ಇತರರಿದ್ದರು.
ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ: ರಾಜ್ಯದಲ್ಲಿ ಇಎಸ್‌ಐನ 7 ದೊಡ್ಡ ಆಸ್ಪತ್ರೆಗಳು ಹಾಗೂ 113 ಡಿಸ್ಪೆನ್ಸರಿಗಳು ಕಾರ್ಯನಿರ್ವಹಿಸುತ್ತಿವೆ. ಕೇಂದ್ರ ಸರ್ಕಾರ ಇಎಸ್‌ಐ ಆಸ್ಪತ್ರೆಗಳಿಗೆ ವರ್ಷಕ್ಕೆ 400 ಕೋಟಿ ರೂ. ಮೌಲ್ಯದ ಔಷಧ ಸರಬರಾಜು ಮಾಡುತ್ತದೆ. ಇದರ ಸಮರ್ಪಕ ಬಳಕೆ ಆಗಬೇಕು. ಕೆಜಿಎಫ್‌ನ ಇಎಸ್‌ಐ ಆಸ್ಪತ್ರೆ ಮೇಲ್ದರ್ಜೆಗೇರಿಸಬೇಕೆಂಬ ಬೇಡಿಕೆಯನ್ನು ವೈದ್ಯರು, ಸ್ಥಳೀಯರು ಮುಂದಿಟ್ಟಿದ್ದು, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಶಿವರಾಮ ಹೆಬ್ಬಾರ ಹೇಳಿದರು.