ಜಿಲ್ಲೆ

ಮೂಲೆಗುಂಪಾಗುತ್ತಿರುವ ತತ್ವಪದ ಗಾಯಕರು: ಸಾಹಿತಿ ಡಾ.ಪ್ರದೀಪ್‌ಕುಮಾರ್ ಹೆಬ್ರಿ ಬೇಸರ

ಮಂಡ್ಯ: ತತ್ವಪದಗಳು ಎಂದರೆ ಜೀವನದ ರಹಸ್ಯಗಳನ್ನು ದರ್ಶಿಸುವ, ಲೌಕಿಕ ಬದುಕಿನ ಎಲ್ಲ ಹಂಗುಗಳನ್ನು ಮೀರಿ ಉಪದೇಶಿಸುವ ಮತ್ತು ಬದುಕನ್ನು ಪುನೀತಗೊಳಿಸುವುದಾಗಿದೆ. ಅದೊಂದು ನಿಜಸ್ಥಿತಿ, ಬ್ರಹ್ಮಜ್ಞಾನ ಎಂದು ಸಾಹಿತಿ ಡಾ.ಪ್ರದೀಪ್‌ಕುಮಾರ್ ಹೆಬ್ರಿ ಬಣ್ಣಿಸಿದರು.

ತಾಲೂಕಿನ ಹಲ್ಲೇಗೆರೆ ಗ್ರಾಮದಲ್ಲಿ ಶಿವಶರಣೆ ಅಮ್ಮಯ್ಯಮ್ಮ ದುರ್ಗೇಗೌಡ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ಮೂರನೇ ಶಿವಾರಾಧನಾ ಶರಣ ಮೇಳ, ವಚನರತ್ನ ಪ್ರಶಸ್ತಿ ಪ್ರದಾನ, ಜಿಲ್ಲಾ ಮಟ್ಟದ ತತ್ವಪದ ಸ್ಪರ್ಧೆ ಹಾಗೂ ಡಾ.ಶಂಕರ ಹಲ್ಲೇಗೆರೆ ಅವರ ತತ್ವಪದ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ಪ್ರಸ್ತುತ ಬದುಕಿನಲ್ಲಿ ತತ್ವಪದ ಗಾಯಕರು ಮೂಲೆಗುಂಪಾಗುತ್ತಿದ್ದಾರೆ. ಬದುಕಿನ ಸತ್ಯಮಾರ್ಗ ದರ್ಶನ ಮಾಡುವ ಈ ಪರಂಪರೆ ನಶಿಸಿ ಹೋಗುತ್ತಿದೆ. ಮೊಬೈಲ್, ಆನ್‌ಲೈನ್ ಮುಂತಾದ ಆಧುನಿಕತೆಯ ಹುಚ್ಚು ಹೊಳೆಯಲ್ಲಿ ಕೊಚ್ಚಿ ಹೋಗುತ್ತಿರುವ ಸಂದರ್ಭದಲ್ಲಿ ನಮ್ಮ ಅಸ್ಮಿತೆಯೇ ಮರೆಯಾಗುತ್ತಿದೆ. ಹಾಗಾಗಿ ವಿಶ್ವಮಾನವ ಪ್ರಜ್ಞೆ ಮೂಡಿಸುವ ತತ್ವಪದ ಗಾಯಕರ ಗುರುಪಂಥ ತಮ್ಮ ವಿದ್ಯೆಯನ್ನು ಮುಂದಿನ ತಲೆಮಾರಿಗೆ ದಾಟಿಸುವ ಕೆಲಸ ಮಾಡಬೇಕಿದೆ. ಅದಕ್ಕೆ ಮೈಸೂರಿನ ಶರಣ ವಿಶ್ವವಚನ ಫೌಂಡೇಷನ್‌ನ ಸಂಸ್ಥಾಪಕರಾದ ಡಾ.ವಚನ ಕುಮಾರಸ್ವಾಮಿ ಮತ್ತು ರೂಪಾ ಕುಮಾರಸ್ವಾಮಿ ಅವರೂ ಸೇರಿದಂತೆ ಸದ್ವಿಚಾರವಂತರು ಕೈಜೋಡಿಸಬೇಕಿದೆ ಎಂದು ಮನವಿ ಮಾಡಿದರು.

ಪ್ರತಿಷ್ಠಾನದ ಅಧ್ಯಕ್ಷ ಡಾ.ಶಂಕರ ಹಲ್ಲೆಗೆರೆ ಮಾತನಾಡಿ, ನಾನೇಕೆ ಆಧ್ಯಾತ್ಮದತ್ತ ಗಮನ ನೀಡಿದೆ ಎಂದರೆ, ನಮ್ಮ ಇಡೀ ಕುಟುಂಬ ಆತ್ಮಹತ್ಯೆಗೆ ಶರಣಾದ ಬಳಿಕ ನಡೆದ ಘಟನಾವಳಿಗಳು, ನನ್ನನ್ನು ತೇಜೋವಧೆ ಮಾಡಿದ ರೀತಿ, ಜೈಲಿನಲ್ಲಿ ನಿತ್ಯ ತಪಸ್ಸು ಮಾಡಿದಂತೆ ಒಂದೂವರೆ ವರ್ಷಕಾಲ ಬದುಕಿದೆ. ಅಲ್ಲಿಯೇ ತತ್ವಪದಗಳ ರಚನೆಯಲ್ಲಿ ತೊಡಗಿದ್ದು ಎಂದ ಅವರು, ಈ ಎಲ್ಲ ವಿಚಾರಗಳನ್ನೂ ಉಪಸ್ಥಿತರಿದ್ದ ಸ್ವಾಮೀಜಿಗಳು ಹಾಗೂ ಗ್ರಾಮಸ್ಥರ ಎದುರು ನಿವೇದಿಸಿಕೊಂಡು ಭಾವುಕರಾದರು.

ಕನ್ನಡಪರ ಹೋರಾಟಗಾರ ಜಾಣಗೆರೆ ವೆಂಕಟರಾಮಯ್ಯ ಅವರು ಡಾ.ಶಂಕರ ಹಲ್ಲೆಗೆರೆ ಅವರ ಬದುಕು ಬರಹ ಕುರಿತು ಮಾತನಾಡಿ, ಆತ್ಮಸ್ಥೈರ್ಯದಿಂದ ಮುನ್ನಡೆಯುವಂತೆ ಪ್ರೋತ್ಸಾಹಿಸಿದರಲ್ಲದೆ, ಇನ್ನಷ್ಟು ಇಂತಹ ಕಾರ್ಯಕ್ರಮಗಳನ್ನು ಮಾಡಿ. ಅದರಲ್ಲೇ ನೆಮ್ಮದಿ ಕಾಣಿ, ನಿಮ್ಮೊಂದಿಗೆ ನಾವಿದ್ದೇವೆ ಎಂದರು.

ಕೊಮ್ಮೇರಹಳ್ಳಿ ಶಾಖಾಮಠದ ಪೀಠಾಧ್ಯಕ್ಷರಾದ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ ಡಾ.ಶಂಕರ ಹಲ್ಲೇಗೆರೆ ಅವರ ಎರಡು ಪುಸ್ತಕಗಳನ್ನು ಬಿಡುಗಡೆ ಮಾಡಿದರು. ಮೈಸೂರು ಬಸವಜ್ಞಾನ ಮಂದಿರದ ಅಧ್ಯಕ್ಷೆ ಡಾ.ಮಾತೆ ಬಸವಾಂಜಲಿದೇವಿ, ಹುಲಿಯೂರು ದುರ್ಗ ಮಠದ ಸಿದ್ಧಲಿಂಗ ಶಿವಾನಂದ ಸ್ವಾಮೀಜಿ, ಕುಣಿಗಲ್‌ನ ಸಿದ್ದರಾಮ ಚೈತನ್ಯ ಸ್ವಾಮೀಜಿ, ವಿಮರ್ಶಕ ಡಾ.ಭೈರಮಂಗಲ ರಾಮೇಗೌಡ, ವಚನ ಸಾಹಿತ್ಯ ಅಕಾಡೆಮಿ ರಾಜ್ಯಾಧ್ಯಕ್ಷ ಎಲ್ಲೇಗೌಡ ಬೆಸಗರಹಳ್ಳಿ ಇದ್ದರು.