ಜಿಲ್ಲೆ

ಅ.27ರಂದು ಹಲ್ಲೇಗೆರೆಯಲ್ಲಿ ಶಿವಾರಾಧನ ಮೇಳ: ಜಿಲ್ಲಾಮಟ್ಟದ ತತ್ವಪದ ಸ್ಪರ್ಧೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಶಿವಶರಣೆ ಅಮ್ಮಯ್ಯಮ್ಮ ದುರ್ಗೇಗೌಡ ಪ್ರತಿಷ್ಠಾನದ ವತಿಯಿಂದ ತಾಲೂಕಿನ ಹಲ್ಲೇಗೆರೆ ಗ್ರಾಮದ ದಂಡಿನಮ್ಮ ಲಕ್ಷ್ಮೀದೇವಿ ದೇವಸ್ಥಾನದ ಮೈದಾನದಲ್ಲಿ ಅ.27ರಂದು 3ನೇ ಶಿವಾರಾಧನಾ ಶರಣ ಮೇಳ, ವಚನರತ್ನ ಪ್ರಶಸ್ತಿ ಪ್ರದಾನ, ಜಿಲ್ಲಾ ಮಟ್ಟದ ತತ್ವಪದ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಮೇಳದ ಸ್ವಾಗತ ಸಮಿತಿ ಅಧ್ಯಕ್ಷ ಡಾ.ಶಂಕರ ಹಲ್ಲೇಗೆರೆ ತಿಳಿಸಿದರು.

ಸಮಾರಂಭದ ಸಾನ್ನಿಧ್ಯವನ್ನು ಕೊಮ್ಮೇರಹಳ್ಳಿ ವಿಶ್ವಮಾನವ ಕ್ಷೇತ್ರದ ಪುರುಷೋತ್ತಮಾನಂದನಾಥ ಸ್ವಾಮೀಜಿ ವಹಿಸುವರು. ಸಾಹಿತಿ ಡಾ.ಪ್ರದೀಪ್ ಕುಮಾರ್ ಹೆಬ್ರಿ ಮೇಳ ಉದ್ಘಾಟಿಸುವರು. ಶಾಸಕ ರವಿಕುಮಾರ್ ಗಣಿಗ ಅಧ್ಯಕ್ಷತೆ ವಹಿಸುವರು. ಮೈಸೂರು ಬಸವ ಜ್ಞಾನ ಮಂದಿರದ ಅಧ್ಯಕ್ಷೆ ಡಾ.ಮಾತೆ ಬಸವಾಂಜಲಿದೇವಿ ಪ್ರಶಸ್ತಿ ಪ್ರದಾನ ಮಾಡುವರು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಡಾ.ಶಂಕರ್ ಹಲ್ಲೇಗೆರೆ ಅವರ ‘ಹಲ್ಲೇಗೆರೆಯ ತತ್ವಗಳು’ ಭಾಗ-1 ಮತ್ತು 2 ಪುಸ್ತಕಗಳನ್ನು ಚೈತ್ಯನ್ಯ ಮಹಾಸ್ವಾಮಿ, ಬಸವ ಬೃಂಗೇಶ್ವರ ಸ್ವಾಮೀಜಿ ಬಿಡುಗಡೆ ಮಾಡುವರು. ಶಿವಾನಂದಪುರಿ ಮಹಾಸ್ವಾಮಿ ಉಪಸ್ಥಿತರಿರುವರು. ಸಾಹಿತಿ ಡಾ.ಭೈರಮಂಗಲ ರಾಮೇಗೌಡ ಪುಸ್ತಕ ಕುರಿತು ಮಾತನಾಡುವರು. ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಭಾಗವಹಿಸುವರು ಎಂದು ವಿವರಿಸಿದರು.

ಸಮಿತಿಯ ವಸಂತಕುಮಾರ್, ವಿದ್ಯಾಶಂಕರ್ ಹಾಜರಿದ್ದರು.