ಜಿಲ್ಲೆ

ಪ್ರಾಧಿಕಾರದ ರಚನೆ ಸಾಧ್ಯವಿಲ್ಲ: ಜಿಲ್ಲಾಧಿಕಾರಿ ಡಾ.ಕುಮಾರ ಮಾಹಿತಿ

ಕೆ.ಎನ್.ರಾಘವೇಂದ್ರ
ಮಂಡ್ಯ: ಮದ್ದೂರಿನ ಶಿವಪುರ ಧ್ವಜಸತ್ಯಾಗ್ರಹ ಸೌಧದ ಅಭಿವೃದ್ಧಿಗೆ ಪೂರಕವಾಗಿ ಧ್ವಜಸತ್ಯಾಗ್ರಹ ಸೌಧ ಪ್ರಾಧಿಕಾರ ರಚನೆ ಸಾಧ್ಯವಿಲ್ಲ. ಆದರೆ ಸೌಧದ ಹೆಸರಿನಲ್ಲಿ ಪ್ರತಿಷ್ಠಾನ ಅಥವಾ ಟ್ರಸ್ಟ್ ರಚಿಸಬಹುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ನಗರದ ಜಿಪಂ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಪ್ರಾಧಿಕಾರ ರಚಿಸುವಂತೆ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಸಲ್ಲಿಸಿದ್ದ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿ ಅವರು, ಈ ಸಂಬಂಧ ಸರ್ಕಾರದ ಮಟ್ಟದಲ್ಲಿ ಸಲಹೆ ಪಡೆಯಲಾಗಿದೆ. ಆದರೆ, ಆದಾಯ ಬರುವ ಸಂಸ್ಥೆಗಳಿಗೆ ಮಾತ್ರ ಪ್ರಾಧಿಕಾರ ರಚನೆಗೆ ಅವಕಾಶವಿಲ್ಲ, ಆದಾಯವಿಲ್ಲದಕ್ಕೆ ಪ್ರಾಧಿಕಾರ ರಚಿಸಲು ಅವಕಾಶವಿಲ್ಲವೆಂದು ಸರ್ಕಾರ ಸ್ಪಷ್ಟಪಡಿಸಿದೆ ಎಂದು ಹೇಳಿದರು. ಆಗ ಪ್ರೊ.ಜಯಪ್ರಕಾಶಗೌಡ ಅವರು, ಹಾಗಿದ್ದರೆ ಪುತಿನ ಟ್ರಸ್ಟ್ ಮಾದರಿಯಲ್ಲಿ ಟ್ರಸ್ಟ್ ಅಥವಾ ಪ್ರತಿಷ್ಠಾನವನ್ನೇ ರಚಿಸಿ. ಅದರ ಮೂಲಕವಾದರೂ ಸೌಧದ ನಿರ್ವಹಣೆಯಾಗಲಿದೆ. ಅಂತೆಯೇ
ಕಾಟಾಚಾರಕ್ಕೆ ಟ್ರಸ್ಟ್/ಪ್ರಾಧಿಕಾರ ರಚನೆಯಾಗುವುದು ಬೇಡ. ಜವಾಬ್ದಾರಿ ಇರುವವರಿಗೆ ಕೊಡಿ. ಸ್ವಾತಂತ್ರ್ಯದ  ಗ್ರಾಮದ ಪ್ರತೀಕವಾದ ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್ ಅಸ್ತಿತ್ವಕ್ಕೆ ಕಾರಣವಾದ ಧ್ವಜಸತ್ಯಾಗ್ರಹ ಸೌಧವು ಮಂಡ್ಯದ ಗೌರವವಾಗಬೇಕು. ಆ ನಿಟ್ಟಿನಲ್ಲಿ ಅದು ಅಭಿವೃದ್ಧಿಯಾಗಲಿದೆ ಎಂದು ಸಲಹೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ ಡಾ.ಕುಮಾರ, ಸೌಧದ ದುರಸ್ತಿ ಮತ್ತು ಅಭಿವೃದ್ಧಿಗಾಗಿ ಪ್ರಸ್ತುತ ೧.೧೦ ಕೋಟಿ ರೂ ಅನುದಾನ ಲಭ್ಯವಿದೆ. ಈಗಾಗಲೇ ೬೪ ಲಕ್ಷ ರೂ. ವೆಚ್ಚದ ಅಂದಾಜು ಪಟ್ಟಿ ತಯಾರಿಸಲಾಗಿದೆ. ಸೌಧ ಮತ್ತು ಅದರ ಆವರಣದ ಅಭಿವೃದ್ಧಿ ಕಾಮಗಾರಿ ಹಾಗೂ ಮೇಲ್ವಿಚಾರಣೆಗಾಗಿ ೭ ಜನ ಗಣ್ಯರನ್ನೊಳಗೊಂಡ ಸರ್ಕಾರೇತರ ಸಮಿತಿ ರಚಿಸಲಾಗಿದೆ. ವಾರ್ಷಿಕ ೧೦ ಲಕ್ಷ ರೂ. ನಿರ್ವಹಣಾ ವೆಚ್ಚದ ಅಂದಾಜು ಪಟ್ಟಿಯನ್ನೂ ರಚಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಧಾರ್ಮಿಕ ಮತ್ತು ಐತಿಹಾಸಿಕ ಸ್ಥಳವಾದ ಮೇಲುಕೋಟೆಯ ಸಮಗ್ರ ಅಭಿವೃದ್ಧಿ ಮತ್ತು ಮೇಲುಕೋಟೆ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ಧನುಷ್ಕೋಟಿಗೆ ಉತ್ತಮ ಸಂಪರ್ಕ ರಸ್ತೆ, ಅದರ ಸುತ್ತ ವಾಕ್‌ವೇ ಅಭಿವೃದ್ಧಿ, ಪಾರ್ಕಿಂಗ್ ಸ್ಥಳ, ಕುಡಿಯುವ ನೀರು ಮತ್ತು ಶೌಚಗೃಹ, ಲ್ಯಾಂಡ್‌ಸ್ಕೇಪಿಂಗ್, ಕಲ್ಯಾಣಿಗಳು ಮತ್ತು ಮಂಟಪಗಳ ಸ್ವಚ್ಛತೆ, ರಾಯಗೋಪುರ ಮೆಟ್ಟಿಲುಗಳ ಮರು ನಿರ್ಮಾಣ, ವಿದ್ಯುದೀಕರಣ, ಗೇಟುಗಳು ಮತ್ತು ಪಾರ್ಕ್ ನಿರ್ಮಾಣ ಸೇರಿದಂತೆ ಹತ್ತಾರು ಕಾಮಗಾರಿಗಳಿಗೆ ೨೨.೭೦ ಕೋಟಿ ರೂ. ವೆಚ್ಚದ ಕ್ರಿಯಾ ಯೋಜನೆ ತಯಾರಿಸಲಾಗಿದೆ. ಪ್ರವಾಸೋದ್ಯಮ, ಮುಜರಾಯಿ, ಕೇಂದ್ರ ಮತ್ತು ರಾಜ್ಯ ಪುರಾತತ್ವ ಇಲಾಖೆಗಳು, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಅರಣ್ಯ, ಲೋಕೋಪಯೋಗಿ, ಕೆಆರ್‌ಐಡಿಎಲ್ ಮೂಲಕ ಕಾಮಗಾರಿಗಳನ್ನು ನಿರ್ವಹಿಸಲುದ್ದೇಶಿಸಲಾಗಿದೆ ಎಂದು ವಿವರಿಸಿದರು.