ಮಾನ್ವಿಯ ಶಿವಪ್ರಿಯ ಪತ್ತಿನ ಸೌಹಾರ್ದ ಸಹಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ವಾರ್ಷಿಕ ಮಹಾಸಭೆಯನ್ನು ಕುರುಬರ ಸಮಾಜದ ರಾಜ್ಯ ಅಧ್ಯಕ್ಷ ಎಂ.ಈರಣ್ಣ ಉದ್ಘಾಟಿಸಿದರು. ಸಹಕಾರಿ ಅಧ್ಯಕ್ಷ ಜಾಕೀರ್ ಮೋಯಿನುದ್ದೀನ್, ಸಿಇಒ ನವೀನ್‌ಕುಮಾರ ಇದ್ದರು. 
ಜಿಲ್ಲೆ

ಶಿವಪ್ರಿಯ ಸಹಕಾರಿಗೆ 82.58 ಲಕ್ಷ ರೂ.ನಿವ್ವಳ ಲಾಭ

ಮಾನ್ವಿ: ಸಹಕಾರಿ ಸದಸ್ಯರು, ಸಿಬ್ಬಂದಿ ಪರಿಶ್ರಮದಿಂದ ಶಿವಪ್ರಿಯ ಪತ್ತಿನ ಸೌಹಾರ್ದ ಸಹಕಾರಿ ಸಂಘ 11 ವರ್ಷಗಳ ಅವಧಿಯಲ್ಲಿ 82.58 ಲಕ್ಷ ರೂ. ನಿವ್ವಳ ಲಾಭ ಪಡೆದಿದೆ ಎಂದು ಕುರುಬರ ಸಮಾಜದ ರಾಜ್ಯ ಅಧ್ಯಕ್ಷ ಎಂ.ಈರಣ್ಣ ಹೇಳಿದರು.

ಪಟ್ಟಣದ ಶಿವಪ್ರಿಯ ಪತ್ತಿನ ಸೌಹಾರ್ದ ಸಹಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ 11ನೇ ವಾರ್ಷಿಕ ಮಹಾಸಭೆಯ ಉದ್ಘಾಟಿಸಿ ಮಾತನಾಡಿದರು. ಸಹಕಾರಿಯಿಂದ ಆರ್ಥಿಕವಾಗಿ ಹಿಂದುಳಿದ ಹಾಗೂ ದುರ್ಬಲ ವರ್ಗಗಳಿಗೆ ಮತ್ತು ಸಣ್ಣಪುಟ್ಟ ವ್ಯಾಪಾರಸ್ಥರು, ರೈತರು ಸೇರಿ ಇತರರಿಗೆ ಸಾಲ ಸೌಲಭ್ಯ ಕಲ್ಪಿಸಿ ಆರ್ಥಿಕ ಪುನಶ್ಚೇತನಕ್ಕೆ ಆದ್ಯತೆ ನೀಡಲಾಗಿದೆ ಎಂದರು.

ಸಂಘದ ಅಧ್ಯಕ್ಷ ಜಾಕೀರ್ ಮೊಯಿನುದ್ದೀನ್ ಮಾತನಾಡಿ, ಶಿವಪ್ರಿಯ ಪತ್ತಿನ ಸಹಕಾರಿಯಲ್ಲಿ ಒಟ್ಟು 2471 ಸದಸ್ಯರು ಇದ್ದು, 73.60 ಲಕ್ಷ ರೂ. ಷೇರು ಬಂಡವಾಳ ಹಾಗೂ 23.49 ಕೋಟಿ ರೂ. ಠೇವಣಿ ಮತ್ತು 22 ಕೋಟಿ ರೂ. ದುಡಿಯುವ ಬಂಡವಾಳ ಹಾಗೂ ಸಾಲ ಮತ್ತು ಮುಂಗಡಗಳು 22.72 ಕೋಟಿ ರೂ. ಸೇರಿ 82.58 ಲಕ್ಷ ರೂ. ನಿವ್ವಳ ಲಾಭಗಳಿಸಿದೆ. ಶೇ.98 ಸಾಲ ವಸೂಲಾತಿ ಮಾಡಿದೆ.

2014ರಲ್ಲಿ ಪ್ರಾರಂಭವಾದ ಶಿವಪ್ರಿಯ ಸಹಕಾರಿ ಸಂಸ್ಥಾಪಕ ದಿ.ಮಮತಾ ಬಸವರಾಜ ಆಶಯದಂತೆ ಸಂಘಕ್ಕೆ ನಿವೇಶನ ಖರೀದಿಸಿ ಸದ್ಯದಲ್ಲೇ ಕಟ್ಟಡ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು. ಸಹಕಾರಿ ಸದಸ್ಯರಾದ ಕವಿತಾ ಷಣ್ಮುಖ ಆಚಾರಿ ಮತ್ತು ನೀಲಕಂಠಪ್ಪ ವಾರ್ಷಿಕ ವರದಿ ಮಂಡಿಸಿದರು.

ಸಹಕಾರಿ ನಿಕಟಪೂರ್ವ ಅಧ್ಯಕ್ಷ ಆರ್.ವೆಂಕಯ್ಯಶೆಟ್ಟಿ, ಕಾನೂನು ಸಲಹೆಗಾರ ಎನ್.ಎನ್.ರಾಜು, ಶಿವಪ್ರಿಯ ಪತ್ತಿನ ಸೌಹಾರ್ದ ಸಹಕಾರಿ ಉಪಾಧ್ಯಕ್ಷ ಶ್ರೀನಿವಾಸ್ ಶೆಟ್ಟಿ, ನಿರ್ದೇಶಕರಾದ ವೀರೇಶಸ್ವಾಮಿ ರೌಡೂರು, ಗೋವಿಂದ ಪವಾರ್, ಸರಸ್ವತಿ ಅಶೋಕಕುಮಾರ, ಬಸವರಾಜ ಚಿಂಚೋಳಿ, ನಾಗರಾಜ, ಶರಣಪ್ಪ ಮೇದಾ, ನೀಲಕಂಠಪ್ಪ, ಶಿವಮೂರ್ತಿ, ಸಿಇಒ ನವೀನ್‌ಕುಮಾರ, ಕಾನೂನು ಸಲಹೆಗಾರ ಎ.ಎನ್.ರಾಜು, ಶಿಕ್ಷಕ ಅಶೋಕಕುಮಾರ ಇತರರಿದ್ದರು.