ಬಸವನಬಾಗೇವಾಡಿ: ಭಗವಂತ ಹಾಗೂ ನಾಡಿನ ಶಕ್ತಿ ದೇವತೆಗಳ ಕೃಪಾಶೀರ್ವಾದಿಂದ ಈ ಬಾರಿ ನಾಡಿನಲ್ಲಿ ಉತ್ತಮ ಮಳೆಯಾಗಿದೆ. ಈ ಬಾರಿ ಉತ್ತಮ ಮಳೆಯಿಂದ ಎಲ್ಲ ಜಲಾಶಯಗಳು ತುಂಬಿದ್ದು ಸಂತಸ ತಂದಿದೆ ಎಂದು ಕಬ್ಬು ಅಭಿವೃದ್ಧಿ, ಸಕ್ಕರೆ, ಜವಳಿ, ಕೃಷಿ, ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ವಿಜಯಪುರ ನಗರದ ಜಮಖಂಡಿ ರಸ್ತೆಯ ತೋಟದ ಸ್ವ ನಿವಾಸದಲ್ಲಿ ಬಸವನಬಾಗೇವಾಡಿ ಮತಕ್ಷೇತ್ರ ಸೇರಿ ಜಿಲ್ಲೆಯಿಂದ ಆಗಮಿಸಿದ ಸಹಸ್ರಾರು ಜನತೆ, ಸಾರ್ವಜನಿಕರು ಹಾಗೂ ಅಭಿಮಾನಿಗಳು, ಹಿತೈಷಿಗಳು, ಬಂಧು-ಬಳಗದಿಂದ ಭಾನುವಾರ ಬನ್ನಿ ವಿನಿಮಯ ಮಾಡಿಕೊಂಡು ಪರಸ್ಪರ ಶುಭ ಕೋರಿದ ನಂತರ ಅವರು ಮಾತನಾಡಿದರು.
ಕಳೆದ ಬಾರಿ ಭೀಕರ ಬರಗಾಲದಿಂದ ರೈತರು ಹಾಗೂ ದನಕರುಗಳು ಸಂಕಷ್ಟಕ್ಕೆ ಒಳಗಾಗಿದ್ದವು. ಈ ಬಾರಿ ಭಗವಂತ ಹಾಗೂ ರಾಜ್ಯದ ಶಕ್ತಿಪೀಠದ ಜಗನ್ಮಾತೆಗಳ ಆಶೀರ್ವಾದದಿಂದ ಉತ್ತಮ ಮಳೆಯಾಗಿದೆ. ಅನ್ನದಾತರಿಗೆ ಯಾವುದೇ ತೊಂದರೆ ಆಗದಂತೆ ಸುಖ, ಶಾಂತಿ, ನೆಮ್ಮದಿ ದೊರೆಯುವರೊಂದಿಗೆ ರೈತರ ಬೆಳೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
ಗ್ರಾಮೀಣ ಭಾಗದ ಐರಾವಣ ಮೈರಾವಣ ದೊಡ್ಡಾಟ, ಯಕ್ಷಗಾನ, ಹಂತಿಪದ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಬನ್ನಿ ವಿನಿಮಯ ಕಾರ್ಯಕ್ರಮದಲ್ಲಿ ಸಚಿವ ಶಿವಾನಂದ ಪಾಟೀಲರ ಪತ್ನಿ ಭಾಗ್ಯಶ್ರೀ, ಮಕ್ಕಳಾದ ಸತ್ಯಜಿತ್, ಸಂಯುಕ್ತ ಹಾಗೂ ಜಿಲ್ಲೆಯ ವಿವಿಧ ಮಠಾಧೀಶರು ಹಾಗೂ ವಿವಿಧ ರಾಜಕೀಯ ಪಕ್ಷದ ಮುಖಂಡರು ಇತರರಿದ್ದರು.