ವಿಜಯವಾಣಿ ಸುದ್ದಿಜಾಲ ಧಾರವಾಡ
ಶಿವನ ಆರಾಧನೆಗೆ ವಿಶೇಷ ದಿನವಾದ ಮಹಾ ಶಿವರಾತ್ರಿಯನ್ನು ನಗರದಲ್ಲಿ ಬುಧವಾರ ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು. ಬೆಳಗ್ಗೆಯಿಂದಲೇ ಶಿವಲಿಂಗ ದರ್ಶನ ಪಡೆಯಲು ಸರತಿ ಸಾಲಿನಲ್ಲಿ ನಿಂತ ಭಕ್ತ ಸಮೂಹ ಶಿವನಾಮ ಸ್ಮರಿಸಿ ಕೃತಾರ್ಥರಾದರು.
"ದಕ್ಷಿಣ ಕಾಶಿ' ಎಂದೇ ಪ್ರಸಿದ್ಧಿ ಪಡೆದ ಇಲ್ಲಿನ ಕಲಘಟಗಿ ರಸ್ತೆಯ ಶ್ರೀಕ್ಷೇತ್ರ ಸೋಮೇಶ್ವರ ದೇವಸ್ಥಾನದಲ್ಲಿನ ಉದ್ಭವ ಶಿವಲಿಂಗಕ್ಕೆ ನಸುಕಿನ ಜಾವದಿಂದಲೇ ಅಭಿಷೇಕ, ವಿಶೇಷ ಪೂಜೆ, ಬಿಲ್ವಾರ್ಚನೆ ಪ್ರಾರಂಭಿಸಲಾಗಿತ್ತು. ಬೆಳಗ್ಗೆಯೇ ದೇವಸ್ಥಾನಕ್ಕೆ ಆಗಮಿಸಿದ ಭಕ್ತರು ಬಿಸಿಲನ್ನೂ ಲೆಕ್ಕಿಸದೆ ಕಿ.ಮೀ ಉದ್ದದ ಸರದಿಯಲ್ಲಿ ನಿಂತು ಶಿವನ ದರ್ಶನ ಪಡೆದರು.
ಇದಲ್ಲದೆ ಜಯನಗರ ಈಶ್ವರ ದೇವಾಲಯ, ಶ್ರೀನಗರದಲ್ಲಿನ ಶಿವಾಲಯ, ಗಾಂಧಿನಗರದ ಈಶ್ವರ ದೇವಸ್ಥಾನ, ಕಾಮನಕಟ್ಟಿ ಬ್ರಹ್ಮಲಿಂಗೇಶ್ವರ ದೇವಾಲಯ, ಹೆಬ್ಬಳ್ಳಿ ಅಗಸಿ ಈಶ್ವರ ದೇವಾಲಯ, ಎಪಿಎಂಸಿ ಶಂಭುಲಿಂಗೇಶ್ವರ ದೇವಾಲಯ, ಶುಕ್ರವಾರ ಪೇಟ ಮುಖ್ಯ ರಸ್ತೆ ರಾಮಲಿಂಗೇಶ್ವರ ದೇವಸ್ಥಾನ, ಹೊಸ ಓಣಿಯ ಕಲ್ಮೇಶ್ವರ ದೇವಾಲಯ, ತುಂಗಭದ್ರೇಶ್ವರ ದೇವಾಲಯ, ಜೋಶಿ ಗಲ್ಲಿಯ ಸಿದ್ಧರಾಮೇಶ್ವರ ದೇವಾಲಯ, ದೇಶಪಾಂಡೆ ಓಣಿ ತಾರಕೇಶ್ವರ ದೇವಸ್ಥಾನ, ಕುಮಾರೇಶ್ವರ ನಗರದ ಈಶ್ವರ ದೇವಸ್ಥಾನ, ವನಸಿರಿನಗರದ ನಾಗೇಶ್ವರ ದೇವಸ್ಥಾನ ಸೇರಿ ನಗರ ಹಾಗೂ ಗ್ರಾಮೀಣ ಪ್ರದೇಶದ ಹಲವು ಶಿವ ದೇವಾಲಯಗಳಲ್ಲಿ ಮಹಾ ಶಿವರಾತ್ರಿಯ ವಿಶೇಷ ಪೂಜೆ ನಡೆಸಲಾಯಿತು.
ದೇವಾಲಯಗಳಲ್ಲಿ ರುದ್ರಾಭಿಷೇಕ, ಶಿವನಾಮ ಧ್ಯಾನದ ಮೂಲಕ ಶಿವನನ್ನು ಆರಾಧಿಸಿದರೆ ಇನ್ನು ಕೆಲ ಕಡೆಗಳಲ್ಲಿ ವಿಶೇಷ ಪೂಜೆ ಮಾಡಲಾಗಿತ್ತು. ಬಿಲ್ವಾರ್ಚನೆ, ಮಹಾರುದ್ರಾಭಿಷೇಕ, ಶಿವಸ್ಮರಣೆ, ಭಜನೆ ಮೊದಲಾದ ಕಾರ್ಯಕ್ರಮಗಳು ನೆರವೇರಿದವು.