ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ 
ಶಿವಮೊಗ್ಗ

ಪ್ರೀತಿ ನಿರಾಕರಿಸಿ ಹಲ್ಲೆ, ಮನನೊಂದ ಯುವಕ ಆತ್ಮಹತ್ಯೆ | Youth Suicide

ಪ್ರಮುಖ ಮುಖ್ಯಾಂಶಗಳು

  • ಪ್ರೀತಿ ನಿರಾಕರಿಸಿದ್ದಲ್ಲದೆ, ಯುವತಿ ಕುಟುಂಬದವರಿಂದ ಹಲ್ಲೆ
  • ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲೇ ವಿಷ ಸೇವಿಸಿ ಆತ್ಮಹತ್ಯೆ
  • ಶಿಕಾರಿಪುರ ತಾಲೂಕಿನ ಶಬರೀಶ್ ಮೃತ ಯುವಕ
ಶಿವಮೊಗ್ಗ: ಪ್ರೀತಿ ನಿರಾಕರಿಸಿದ್ದಲ್ಲದೆ, ಯುವತಿ ಕುಟುಂಬದವರಿಂದ ಹಲ್ಲೆಗೊಳಗಾಗಿ ಮನನೊಂದ ಯುವಕನೊಬ್ಬ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ(bus stand)ದಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಶಿಕಾರಿಪುರ ತಾಲೂಕಿನ ಶಬರೀಶ್ (28) ಮೃತ ಯುವಕ. ಮೂಲತಃ ಶಿಕಾರಿಪುರದ ಶಬರೀಶ್ ತೀರ್ಥಹಳ್ಳಿಯಲ್ಲಿ ಟೈಲ್ಸ್ ಕೆಲಸ ಮಾಡುತ್ತಿದ್ದರು. ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು, ಇಬ್ಬರ ಪ್ರೇಮ(Love)ಕ್ಕೆ ಮನೆಯವರ ವಿರೋಧವಿತ್ತು ಎನ್ನಲಾಗಿದೆ. 
ಕಳೆದ ಕೆಲವು ದಿನಗಳ ಹಿಂದೆ ಯುವತಿಯು ಶಬರೀಶ್‌ಗೆ ಕರೆ ಮಾಡಿ ನಾನು ನಿನ್ನ ಬಳಿ ಮಾತನಾಡಬೇಕು. ಶಿವಮೊಗ್ಗದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬರುವಂತೆ ತಿಳಿಸಿದ್ದಳು. ಹಾಗಾಗಿ ಶಬರೀಶ್ ಕೆಎಸ್‌ಆರ್‌ಟಿಸಿ(Ksrtc) ಬಸ್ ನಿಲ್ದಾಣಕ್ಕೆ ಬಂದಿದ್ದರು.
 ಆ ಸಂದರ್ಭದಲ್ಲಿ ಬಸ್ ನಿಲ್ದಾಣದಲ್ಲಿ ಶಬರೀಶ್ ಮತ್ತು ಯುವತಿ ನಡುವೆ ಮಾತಿನ ಚಕಮಕಿ ನಡೆದಿದ್ದು, ಯುವತಿ ತನ್ನ ಸಂಬಂಧಿಕರೊಂದಿಗೆ ಸೇರಿ ಶಬರೀಶ್ ಮೇಲೆ ಹಲ್ಲೆ ಕೂಡ ನಡೆಸಿದ್ದಾಳೆ. ನಿನ್ನನ್ನು ಮದುವೆಯಾಗುವುದಿಲ್ಲ ಎಂದು ನಿರಾಕರಿಸಿದ್ದಲ್ಲದೆ, ಶಬರೀಶ್ ಮೊಬೈಲ್‌ನಲ್ಲಿದ್ದ ಫೋಟೋ(Photos)ಗಳನ್ನು ಬಲವಂತವಾಗಿ ಡಿಲೀಟ್ ಮಾಡಿಸಿ ಬೆದರಿಕೆ ಹಾಕಿದ್ದರು ಎಂದು ದೂರು ನೀಡಲಾಗಿದೆ.
ಸಾರ್ವಜನಿಕ ಸ್ಥಳ(Public place)ದಲ್ಲಿ ನಡೆದ ಅವಮಾನ ಹಾಗೂ ಹಲ್ಲೆಯಿಂದ ಮನನೊಂದ ಶಬರೀಶ್ ಬಸ್ ನಿಲ್ದಾಣದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದನು. ತಕ್ಷಣ ಅಲ್ಲಿದ್ದವರು ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಬರೀಶ್ ಮೃತಪಟ್ಟಿದ್ದಾನೆ. ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.