ತೀರ್ಥಹಳ್ಳಿ ತಾಲೂಕಿನ ಆರಗ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆವರಣದಲ್ಲಿ ಶಾಸಕ ಆರಗ ಜ್ಞಾನೇಂದ್ರ ಸಸಿ ನೆಟ್ಟರು. ಶಾಂತಕುಮಾರ್, ಹೊಸಕೊಪ್ಪ ಈಶ್ವರಪ್ಪ, ವಸಂತ್ ಇತರರಿದ್ದರು.
ತೀರ್ಥಹಳ್ಳಿ: ಆರ್ಥಿಕ ಮತ್ತು ತಾಂತ್ರಿಕವಾಗಿ ಮುಂದುವರೆದಿರುವ ಭಾರತದಲ್ಲಿ ಯುವಜನರ ಮೇಲೆ ಹೆಚ್ಚಿನ ಹೊಣೆಗಾರಿಕೆ ಇದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ತಾಲೂಕಿನ ಆರಗದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ದೇಶದಲ್ಲಿ ಶೇ. 60ರಷ್ಟು ಯುವಜನರು ಇದ್ದು, ನಕಾರಾತ್ಮಕ ವಿಚಾರಗಳಿಂದ ದೂರ ಇದ್ದು, ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಪರಿಸರ ಕಾಳಜಿಯೊಂದಿಗೆ ಸಮಾಜದ ಸಂಪತ್ತಾಗಿ ರೂಪುಗೊಳ್ಳಬೇಕಿದೆ ಎಂದು ತಿಳಿಸಿದರು.
ಭಾರತ ಆರ್ಥಿಕವಾಗಿ ಸುಭದ್ರ ಸ್ಥಿತಿಯಲ್ಲಿದೆ. ಆಹಾರಕ್ಕೆ ಕೊರತೆ ಇದ್ದ ದೇಶದಲ್ಲಿ ಅನ್ನದಾತರ ಶ್ರಮದ ಫಲವಾಗಿ ಜಗತ್ತಿನ 170 ದೇಶಗಳಿಗೆ ಅಕ್ಕಿ, ಗೋದಿ ರಫ್ತು ಮಾಡುತ್ತಿದ್ದೇವೆ. ಹಾಲು ಉತ್ಪಾದನೆಯಲ್ಲೂ ಪ್ರಥಮ ಸ್ಥಾನದಲ್ಲಿದ್ದೇವೆ. ಎಲ್ಲ ರೀತಿ ಸವಲತ್ತುಗಳನ್ನು ಹೊಂದಿದ್ದು, ಯುವಜನತೆ ಅದೃಷ್ಟವಂತರಾಗಿದ್ದಾರೆ. ದೇಶದ ಭವಿಷ್ಯ ಉಜ್ವಲಗೊಳಿಸುವಲ್ಲಿ ಯುವಜನರು ಶ್ರಮಿಸಬೇಕು ಎಂದರು.
ಚಿಂತಕ ಶಾಂತಕುಮಾರ್, ಹೊಸಕೊಪ್ಪ ಈಶ್ವರ್, ಸುಬ್ರಹ್ಮಣ್ಯ, ಕಾಲೇಜಿನ ಪ್ರಾಚಾರ್ಯ ವಸಂತ್, ಉಪನ್ಯಾಸಕರು ಉಪಸ್ಥಿತರಿದ್ದರು.