ಶಿರಾಳಕೊಪ್ಪದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮವನ್ನು ಶಾಸಕ ಬಿ.ವೈ.ವಿಜಯೇಂದ್ರ ಉದ್ಘಾಟಿಸಿದರು. ಪ್ರೊ. ರಾಜೇಶ್ವರಿ, ಪ್ರಭಾಕರ ಮಂಟೋರಿ, ಎಚ್.ಮಂಜುನಾಥ ಇತರರಿದ್ದರು.
- ಯುವಜನರಲ್ಲಿದೆ ಸಮಾಜವನ್ನು ಮುನ್ನಡೆಸುವ ಶಕ್ತಿ
- ಸಾಮಾಜಿಕ ಜಾಲತಾಣವನ್ನು ಎಚ್ಚರಿಕೆಯಿಂದ ಬಳಜಿ
ಶಿರಾಳಕೊಪ್ಪ: ವಿದ್ಯಾರ್ಥಿ ಜೀವನ ಅತ್ಯಂತ ಅಮೂಲ್ಯ. ಶ್ರೇಷ್ಠ ವಿದ್ಯಾರ್ಥಿಗಳಾಗಿ ರೂಪುಗೊಳ್ಳಲು ಆದ್ಯತೆ ನೀಡಬೇಕು ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್, ಯುವ ರೆಡ್‌ಕ್ರಾಸ್, ರೋವರ್ಸ್ ರೇಂಜರ್ಸ್ ಹಾಗೂ ರೆಡ್ ರಿಬ್ಬನ್ ಘಟಕಗಳ ಚಟುವಟಿಕೆ ಉದ್ಘಾಟಿಸಿ ಮಾತನಾಡಿ, ಯುವಜನರೇ ದೇಶದ ನಿಜವಾದ ಸಂಪತ್ತು. ಸಮಾಜವನ್ನು ಮುನ್ನಡೆಸುವ ಶಕ್ತಿ ಯುವಜನರಲ್ಲಿದೆ. ಸಾಮಾಜಿಕ ಜಾಲತಾಣವನ್ನು ಎಚ್ಚರಿಕೆಯಿಂದ ಬಳಸಬೇಕು. ಸರಿಯಾದ ರೀತಿಯಲ್ಲಿ ಬಳಸಿದರೆ ಮಾರ್ಗದರ್ಶಕ ಆಗುತ್ತದೆ ಎಂದು ತಿಳಿಸಿದರು.
ಮುಂದಿನ ತಿಂಗಳು ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳುವ ಯೋಜನೆ ಇದೆ. ಡಿಸೆಂಬರ್ ಅಥವಾ ಜನವರಿಯಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ರಾಜ್ಯದ ಪ್ರತಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ನಿರುದ್ಯೋಗಿಗಳಿಗೆ ತರಬೇತಿ ನೀಡಲಾಗುತ್ತಿದೆ. ಅಂತಿಮ ಹಂತದಲ್ಲಿ ಶಿಕಾರಿಪುರದ ಕುಮದ್ವತಿ ಶಿಕ್ಷಣ ಸಂಸ್ಥೆಯಲ್ಲಿ ನಡೆಯುವ ಉದ್ಯೋಗ ಮೇಳದಲ್ಲಿ ಉದ್ಯೋಗಾವಕಾಶ ಕಲ್ಪಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.
ನಿವೃತ್ತ ಪ್ರಾಚಾರ್ಯೆ ಪ್ರೊ. ರಾಜೇಶ್ವರಿ ಉಪನ್ಯಾಸ ನೀಡಿದರು. ಪ್ರಭಾಕರ ಮಂಟೋರಿ, ಎಚ್.ಮಂಜುನಾಥ, ವಿ.ತನುರಾಜ್, ಡಾ. ಚನ್ನಬಸವಯ್ಯ, ಡಾ. ಎಲ್.ಎಂ.ಪುನೀತ್‌ಕುಮಾರ್, ಹೇಮಾ ಪಂಡಿತ್, ಎಲ್.ಕೆ.ಪವನ್‌ಕುಮಾರ್, ಮಂಜುಳಾ, ಸನಾವುಲ್ಲಾ, ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಇತರರಿದ್ದರು.