ಮೃತ ಪಶು ವೈದ್ಯೆ ಸಮೀಕ್ಷಾ ರೆಡ್ಡಿ
- ಹುಲಿ-ಸಿಂಹಧಾಮದಲ್ಲಿ ಗುರುವಾರ ರಾತ್ರಿ ಆರೋಗ್ಯ ತಪಾಸಣೆಗೆ ತೆರಳಿದ್ದ ಪಶುವೈದ್ಯೆ
- ಚಿಕಿತ್ಸೆ ಫಲಿಸದೇ ಡಾ. ಸಮೀಕ್ಷಾ ರೆಡ್ಡಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಸಾವು
- ಥರ್ಮಲ್ ಕ್ಯಾಮೆರಾ ಬಳಸಿ ದೇಹದ ತಾಪಮಾನ ಪರೀಕ್ಷಿಸುತ್ತಿದ್ದಾಗ ದಾಳಿ
ಶಿವಮೊಗ್ಗ: ಶಿವಮೊಗ್ಗದ ತ್ಯಾವರೆಕೊಪ್ಪದ ಹುಲಿ-ಸಿಂಹಧಾಮದಲ್ಲಿ ಗುರುವಾರ ರಾತ್ರಿ ಆರೋಗ್ಯ ತಪಾಸಣೆಗೆ ತೆರಳಿದ್ದ ಪಶುವೈದ್ಯೆಯೊಬ್ಬರ ಮೇಲೆ ನೀರಾನೆ(ಹಿಪ್ಪೊಪೊಟಮಸ್-Hippopotamus) ದಾಳಿ ನಡೆಸಿದ್ದು, ಚಿಕಿತ್ಸೆ ಫಲಿಸದೇ ಆಕೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಬೆಂಗಳೂರಿನ ಸಕಲವಾರ ಗ್ರಾಮದ ಡಾ. ಸಮೀಕ್ಷಾ ರೆಡ್ಡಿ (27) ಮೃತ ಪಶು ವೈದ್ಯೆ(Veterinarian). ಯುಗಾದಿ ಹಬ್ಬದ ದಿನವಾದ ಗುರುವಾರ ರಾತ್ರಿ ಹಿರಿಯ ಪಶು ವೈದ್ಯರ ಸೂಚನೆ ಮೇರೆಗೆ ಗರ್ಭಿಣಿಯಾಗಿದ್ದ ನೀರಾನೆ ಆರೋಗ್ಯ ತಪಾಸಣೆ(Health check-up)ಗೆ ತರಬೇತಿ ನಿರತ ವೈದ್ಯೆ ಸಮೀಕ್ಷಾ ರೆಡ್ಡಿ ತೆರಳಿದ್ದರು ಎನ್ನಲಾಗಿದೆ. ಈ ವೇಳೆ ಏಕಾಏಕಿ ದಾಳಿ ಮಾಡಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವ ವೈದ್ಯೆ ಶುಕ್ರವಾರ ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಡಾ. ಸಮೀಕ್ಷಾ ರೆಡ್ಡಿ(Dr. Sameeksha Reddy) ಅವರು ಪಶು ವೈದ್ಯಾಧಿಕಾರಿಯಾಗಿ ಆಯ್ಕೆಯಾಗಿ ಮೃಗಾಲಯದ ಪಶುವೈದ್ಯರಿಂದ ತರಬೇತಿ ಪಡೆಯುತ್ತಿದ್ದರು. ರಾತ್ರಿ 10.30ರ ಸುಮಾರಿಗೆ ಮೃಗಾಲಯದ ಆಸ್ಪತ್ರೆಗೆ ತೆರಳಿ ಸನ್ ಕೊನ್ಯೂರ್ ಪಕ್ಷಿ(Sun Conure bird)ಗೆ ಫಾಲೊಅಪ್ ಚಿಕಿತ್ಸೆ ನೀಡಿದ್ದರು. ನಂತರ ರಾತ್ರಿ 11.45ಕ್ಕೆ ಥರ್ಮಲ್ ಕ್ಯಾಮೆರಾ ಬಳಸಿ ಗರ್ಭಿಣಿ ನೀರಾನೆ ದೇಹದ ತಾಪಮಾನ ಪರೀಕ್ಷಿಸುತ್ತಿದ್ದರು. ಈ ವೇಳೆ ನೀರಾನೆ ಏಕಾಏಕಿ ದಾಳಿ ನಡೆಸಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ತನಿಖೆಗೆ ಅರಣ್ಯ ಸಚಿವರ ಆದೇಶ
ತಾವರೆಕೊಪ್ಪ ಮೃಗಾಲಯದಲ್ಲಿ ನೀರಾನೆಗೆ ಚಿಕಿತ್ಸೆ ನೀಡಲು ತೆರಳಿದ್ದ ವೇಳೆ ದಾಳಿಗೆ ಸಿಲುಕಿ ಯುವ ಪಶುವೈದ್ಯೆ ಮೃತಪಟ್ಟಿರುವ ಘಟನೆ ಸಂಬಂಧ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಉನ್ನತಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ಪಶುವೈದ್ಯೆ ಮೃತಪಟ್ಟಿರುವುದು ಅತ್ಯಂತ ದುರದೃಷ್ಟಕರ. ಪ್ರತಿಯೊಂದು ಜೀವವೂ ಅಮೂಲ್ಯವಾದದ್ದು. ಈ ಕಷ್ಟದ ಹಾಗೂ ದುಃಖದ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಮೃತ ವೈದ್ಯೆಯ ಕುಟುಂಬದ ಬೆಂಬಲಕ್ಕೆ ನಿಲ್ಲಲಿದೆ ಎಂದಿದ್ದು, ಮೃತ ಯುವ ವೈದ್ಯೆಯ ಕುಟುಂಬಸ್ಥರಿಗೆ ನಿಯಮಾನುಸಾರವಾಗಿ ಕೂಡಲೇ ಪರಿಹಾರ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.ಮೃಗಾಲಯಗಳಲ್ಲಿ ಕಾರ್ಯನಿರ್ವಹಿಸುವಾಗ ವಹಿಸಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ರಾಜ್ಯದ ಎಲ್ಲ ಮೃಗಾಲಯಗಳಲ್ಲಿರುವ ಪಶುವೈದ್ಯರು ಯಾವುದೇ ವನ್ಯಜೀವಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಕಡ್ಡಾಯವಾಗಿ ಪ್ರಮಾಣಿತ ಕಾರ್ಯಾಚರಣೆ ಮಾನದಂಡಗಳನ್ನು (ಎಸ್‌ಓಪಿ) ಪಾಲನೆ ಮಾಡಬೇಕು. ಜತೆಗೆ ತ್ಯಾವರೆಕೊಪ್ಪ ಮೃಗಾಲಯದಲ್ಲಿ ನಡೆದಿರುವ ದುರಂತದ ಕುರಿತು ಹಿರಿಯ ಪಶುವೈದ್ಯರು ಹಾಗೂ ಅರಣ್ಯಾಧಿಕಾರಿಗಳನ್ನೊಳಗೊಂಡ ತಂಡದ ಮೂಲಕ ಸಮಗ್ರ ತನಿಖೆ ನಡೆಸಬೇಕು. 7 ದಿನದೊಳಗಾಗಿ ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ.