ಶಿವಮೊಗ್ಗದಲ್ಲಿ ವಿಶ್ವ ಯೋಗ ದಿನಾಚರಣೆಯ ಸಿದ್ಧತೆ ಕುರಿತು ಪ್ರಭುಲಿಂಗ ಕವಳಿಕಟ್ಟಿ ಸಭೆ ನಡೆಸಿದರು. ಡಾ. ಲಿಂಗರಾಜ್, ಡಾ. ಸದಾನಂದ ಜೋಷಿ, ಡಾ. ಸಂಜಯ್ ಇದ್ದರು.
- ಪೂರ್ವ ಸಿದ್ದತಾ ಸಭೆಯಲ್ಲಿ ಡಿಸಿ ಅಭಿಮತ
- ಶಿವಮೊಗ್ಗದಲ್ಲಿ ವಿಶ್ವ ಯೋಗ ದಿನಾಚರಣೆ
- 1,500 ಮಂದಿ ಭಾಗವಹಿಸುವ ನಿರೀಕ್ಷೆ
ಶಿವಮೊಗ್ಗ: ಮನುಷ್ಯನ ಆಯುಷ್ಯ ಕ್ಷೀಣಿಸಿದಂತೆ ವಯೋಸಹಜ ದೌರ್ಬಲ್ಯ(weakness) ಗಳು ಕಾಣಿಸಿಕೊಳ್ಳುತ್ತವೆ. ವಯಸ್ಸಾಗುವ ಪ್ರಕ್ರಿಯೆಯನ್ನು ಆರೋಗ್ಯಕರ (healty) ವಾಗಿ ಎದುರಿಸಲು ಮತ್ತು ವೃದ್ಧಾಪ್ಯದ ಲಕ್ಷಣಗಳನ್ನು ಮುಂದೂಡಲು ಯೋಗಭ್ಯಾಸ (yogabyasa) ವೇ ಏಕೈಕ ಮಾರ್ಗ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅಭಿಪ್ರಾಯಪಟ್ಟರು.
ನಗರದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಜೂ.21ರಂದು ನಡೆಯಲಿರುವ ವಿಶ್ವ ಯೋಗ ದಿನಾಚರಣೆಯ ಸಿದ್ಧತೆ ಕುರಿತು ಮಂಗಳವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಅಂದಿನ ಕಾರ್ಯಕ್ರಮದಲ್ಲಿ 1,500 ಯೋಗಬಂಧುಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ದೈಹಿಕ, ಮಾನಸಿಕ ಯೋಗಕ್ಷೇಮ, ಸಮಗ್ರ ಆರೋಗ್ಯದ ಮಹತ್ವ ಮತ್ತು ಆಧ್ಯಾತ್ಮಿಕ ಪ್ರಯೋಜನಗಳನ್ನು ಉತ್ತೇಜಿಸಲು, ಆರೋಗ್ಯಕರ ಮತ್ತು ಸಮತೋಲಿತ ಜೀವನಶೈಲಿ ಅಳವಡಿಸಿಕೊಳ್ಳಲು ಅತ್ಯಂತ ಸಹಕಾರಿಯಾಗಿರುವ ಯೋಗದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸರ್ಕಾರವೇ ಕಾರ್ಯಕ್ರಮ ಆಯೋಜಿಸುತ್ತಿದೆ ಎಂದು ಹೇಳಿದರು.
ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುವ ಯೋಗ ದಿನಾಚರಣೆಯಲ್ಲಿ ಸ್ಕೌಟ್ ಆ್ಯಂಡ್ ಗೈಡ್ಸ್, ಕೆಎಸ್‌ಆರ್‌ಪಿ, ಸ್ಥಳೀಯ ಯೋಗ ತರಬೇತಿ ಸಂಸ್ಥೆಗಳ ಕಲಿಕಾರ್ಥಿಗಳು, ಯೋಗಾಸಕ್ತರು ಹಾಗೂ ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ. ಶಿಷ್ಟಾಚಾರದಂತೆ ಯೋಗ ಕಾರ್ಯಕ್ರಮಗಳು, ಪ್ರದರ್ಶನಗಳು, ಲಘು ಉಪನ್ಯಾಸ ನಡೆಯಲಿದೆ ಎಂದು ತಿಳಿಸಿದರು.
ಸಾರ್ವಜನಿಕರಿಗೆ ಯೋಗದ ಮಹತ್ವ ತಿಳಿಸಲು ಜೂ.19ರ ಬೆಳಗ್ಗೆ 10ಕ್ಕೆ ಎಲ್ಲ ಸರ್ಕಾರಿ ಮತ್ತು ಖಾಸಗಿ ಆಯುಷ್ ಮಹಾವಿದ್ಯಾಲಯಗಳ ಸಹಕಾರದೊಂದಿಗೆ ಯೋಗ ಜಾಥಾ ಆಯೋಜಿಸಲಾಗುವುದು ಎಂದು ಹೇಳಿದರು.
ಸರ್ಕಾರಿ ಜಿಲ್ಲಾ ಆಯುಷ್ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ವೀಣಾ, ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಲಿಂಗರಾಜ್, ಪ್ರಮುಖರಾದ ಡಾ. ಸಂಜಯ್, ಡಾ. ಸದಾನಂದ ಜೋಷಿ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೇಖ್ಯಾ ನಾಯ್ಕ ಇತರರಿದ್ದರು.