ವಿಜಯವಾಣಿ ಮಾಧ್ಯಮ ಸಹಯೋಗದಲ್ಲಿ ಶಿವಮೊಗ್ಗದಲ್ಲಿ ಏರ್ಪಡಿಸಿದ್ದ ವಿಶ್ವ ಯೋಗ ದಿನಾಚರಣೆಯಲ್ಲಿ ವಿವಿಧ ಯೋಗ ಸಂಘಟನೆಗಳ ಯೋಗ ಸಾಧಕರು ವಿವಿಧ ಆಸನಗಳನ್ನು ಪ್ರದರ್ಶಿಸಿದರು.
- ಪೇಸ್ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಕಾರ್ಯಕ್ರಮ ಆಯೋಜನೆ
- ಕಾರ್ಯದರ್ಶಿ ಪ್ರೊ. ಬಿ.ಎನ್.ವಿಶ್ವನಾಥಯ್ಯರಿಂದ ಚಾಲನೆ
- ಒಂದು ಗಂಟೆಗೂ ಹೆಚ್ಚು ಕಾಲ ಆಸನ ಪ್ರದರ್ಶನ
ಶಿವಮೊಗ್ಗ: ಮಕ್ಕಳು (childrens) ವಿದ್ಯಾರ್ಥಿಗಳು (students) ಯುವಕ-ಯುವತಿಯರು, ವಿವಿಧ ಯೋಗ (yoga) ಕೇಂದ್ರಗಳ ಯೋಗಪಟುಗಳು ಒಂದು ತಾಸಿಗೂ ಹೆಚ್ಚು ಕಾಲ ಎಲ್ಲರೂ ಏಕಕಾಲದಲ್ಲಿ ಯೋಗ, ಧ್ಯಾನ ಮತ್ತು ಪ್ರಾಣಾಯಮದಲ್ಲಿ ನಿರತರಾಗಿದ್ದರು.
‘ವಿಜಯವಾಣಿ’ ಮಾಧ್ಯಮ ಸಹಯೋಗದಲ್ಲಿ ತೇವರಚಟ್ನಹಳ್ಳಿ ಪೇಸ್ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಚ್ಚುಕಟ್ಟಾಗಿ ನೆರವೇರಿತು.
ಪ್ರತಿನಿತ್ಯ ತಪ್ಪದೆ ಯೋಗದ ವಿವಿಧ ಆಸನಗಳನ್ನು ಮಾಡುವವರೂ ಅಲ್ಲಿದ್ದರು. ಮುಂಬರುವ ದಿನಗಳಲ್ಲಿ ನಿತ್ಯ ಯೋಗ ಮಾಡಬೇಕು ಎಂಬ ಸಂಕಲ್ಪ ತೊಟ್ಟವರೂ ಆಗಮಿಸಿದ್ದರು. ಎರಡು ತಾಸಿನ ಕಾರ್ಯಕ್ರಮದಲ್ಲಿ ಹತ್ತಾರು ಆಸನಗಳನ್ನು ಮಾಡುವ ಮೂಲಕ ಯೋಗಪಟುಗಳು ಯೋಗದ ಮಹತ್ವವನ್ನು ಅನಾವರಣಗೊಳಿಸಿದರು.
ಬೆಳಗ್ಗೆ 6.30ಕ್ಕೆ ಆರಂಭವಾದ ಯೋಗ ದಿನಾಚರಣೆ ಮುಕ್ತಾಯವಾಗಿದ್ದು 8.30ಕ್ಕೆ. ಶಂಖನಾದ, ಪ್ರಜ್ಞಾ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ಪ್ರೊ. ಬಿ.ಎನ್.ವಿಶ್ವನಾಥಯ್ಯ ಸಸಿಗೆ ನೀರೆರೆಯುವ ಮೂಲಕ ಯೋಗ ದಿನಾಚರಣೆಗೆ ಚಾಲನೆ ನೀಡಿದರು. ಪೇಸ್ ಖಜಾಂಚಿ ಕೆ.ಇ.ಕಾಂತೇಶ್, ಪೇಸ್ ಇಂಟರ್‌ನ್ಯಾಷನಲ್ ಸ್ಕೂಲ್ ಪ್ರಾಚಾರ್ಯ ಎನ್.ಆರ್.ಪವನ್‌ಕುಮಾರ್ ಮುಂತಾದವರಿದ್ದರು.
ಪೂರ್ವನಿಯೋಜನೆಯಂತೆ ಎಲ್ಲ ಆಸನಗಳ ಪ್ರದರ್ಶನ ನಿಗದಿತ ಸಮಯಕ್ಕೆ ನಡೆಯಿತು. ಪ್ರಥಮ ಅವಧಿ ಕಾರ್ಯಕ್ರಮವನ್ನು ನಮ್ಮ ಯೋಗ ಕುಟುಂಬದ ಗಿರಿರಾಜ್ ನಡೆಸಿಕೊಟ್ಟರು. ಯೋಗ ಮಂತ್ರ ಪಠಣ, ಸೂಕ್ಷ್ಮ ವ್ಯಾಯಾಮ, ಸೂರ್ಯ ನಮಸ್ಕಾರ ನಡೆಯಿತು. ದ್ವಿತೀಯ ಅವಧಿಯಲ್ಲಿ ನಿಂತು ಹಾಗೂ ಕುಳಿತು ಮಾಡುವ ಯೋಗಾಸನಗಳನ್ನು ಕಣಾದ ಯೋಗ ಮತ್ತು ಅಧ್ಯಯನ ಕೇಂದ್ರದ ಸಂಸ್ಥಾಪಕ ಕಾರ್ಯದರ್ಶಿ ಯೋಗಾಚಾರ್ಯ ಅನಿಲ್ ಕುಮಾರ್ ಶೆಟ್ಟರ್ ನಡೆಸಿಕೊಟ್ಟರು.
ತೃತೀಯ ಅವಧಿಯಲ್ಲಿ ಮಲಗಿ ಮಾಡುವ ಯೋಗಾಸನಗಳು, ನಾಲ್ಕನೇ ಅವಧಿಯಲ್ಲಿ ವಿವಿಧ ಪ್ರಾಣಾಯಾಮಗಳನ್ನು ಮಾಡಲಾಯಿತು. ಐದನೇ ಅವಧಿಯಲ್ಲಿ ಆರ್ಟ್ ಆಫ್ ಲಿವಿಂಗ್ ಆಶ್ರಮದ ಸಾಧ್ವಿ ಶುಭಕರಿಜೀ ವಿಶೇಷ ಉಪನ್ಯಾಸ ನೀಡಿದರು.
ಕಣಾದ ಯೋಗ ಮತ್ತು ರಿಸರ್ಚ್ ಫೌಂಡೇಷನ್‌ನ ಅನಿಲ್‌ಕುಮಾರ್ ಎಚ್.ಶೆಟ್ಟರ್, ಆರ್ಟ್ ಆಫ್ ಲಿವಿಂಗ್‌ನ ಹಿರಿಯ ತರಬೇತುದಾರ ಶಬರೀಶ್ ಕಣ್ಣನ್ ಕಾರ್ಯಕ್ರಮ ನಿರ್ವಹಿಸಿದರು.
"
ಯೋಗದ ನಿಜವಾದ ಅರ್ಥ ಕೂಡುವುದು, ಒಂದಾಗುವುದು, ಸೇರುವುದು. ಈ ಮಹತ್ತರ ತತ್ವದ ಅನುಸಾರ ಶಿವಮೊಗ್ಗದ ಹಲವು ಸಮಾನ ಮನಸ್ಕರ ಯೋಗ ಕೇಂದ್ರಗಳ ಮುಖ್ಯಸ್ಥರು ಹಾಗೂ ಯೋಗಾಭಿಮಾನಿಗಳು ಒಗ್ಗೂಡಿ ವಿಶ್ವ ಯೋಗ ದಿನಾಚರಣೆ ಆಚರಿಸಿರುವುದು ಸಂತಸ ಹಾಗೂ ಪ್ರೇರಣಾದಾಯಕ ಸಂಗತಿ.
— ಶಬರೀಶ್ ಕಣ್ಣನ್ ಆರ್ಟ್ ಆಫ್ ಲಿವಿಂಗ್‌ನ ಹಿರಿಯ ತರಬೇತುದಾರ