ಯೋಗ ದಿನಾಚರಣೆ ಅಂಗವಾಗಿ ತೀರ್ಥಹಳ್ಳಿಯಲ್ಲಿ ಭಾರತೀಯ ಯೋಗ ಶಿಕ್ಷಣ ಸಮಿತಿ ಏರ್ಪಡಿಸಿದ್ದ ಯೋಗ ನೃತ್ಯ ಪ್ರದರ್ಶನ. 
ಶಿವಮೊಗ್ಗ

ಜಗತ್ತಿಗೆ ಯೋಗ ಶ್ರೇಷ್ಠ ಕೊಡುಗೆ

ತೀರ್ಥಹಳ್ಳಿ: ಭಾರತೀಯ ಮೂಲದ ಯೋಗ ಪ್ರಸ್ತುತ ವಿಶ್ವವ್ಯಾಪಿಯಾಗಿದ್ದು, ಜಗತ್ತಿಗೆ ಭಾರತ ನೀಡಿದ ಶ್ರೇಷ್ಠ ಕೊಡುಗೆಯಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಪಟ್ಟಣದ ಗೋಪಾಲ ಗೌಡ ರಂಗಮಂದಿರದಲ್ಲಿ ಭಾರತೀಯ ಯೋಗ ಶಿಕ್ಷಣ ಸಮಿತಿಯಿಂದ ಆಯೋಜಿಸಿದ್ದ ವಿಶ್ವ ಯೋಗ ದಿನಾಚರಣೆಯಲ್ಲಿ ಮಾತನಾಡಿ, ಪ್ರತಿ ನಿತ್ಯ ವ್ಯಾಯಾಮ ಮಾಡುವುದರಿಂದ ದೇಹ ಸದೃಢವಾಗುತ್ತದೆ. ಯೋಗಾಭ್ಯಾಸದಿಂದ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ವೃದ್ಧಿಸುತ್ತದೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಕರೆಯಿಂದ ವಿಶ್ವಸಂಸ್ಥೆ ಯೋಗದಿನ ಘೋಷಿಸಿದ್ದು, ಜಗತ್ತಿನ 169 ರಾಷ್ಟ್ರಗಳಲ್ಲಿ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಮುಸ್ಲಿಂ ರಾಷ್ಟ್ರಗಳಲ್ಲೂ ಲಕ್ಷಾಂತರ ಜನರು ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದರು.
ಮಾನಸಿಕ ತಜ್ಞ ಉಡುಪಿಯ ಡಾ. ವಿರೂಪಾಕ್ಷ ದೇವರಮನೆ ಮಾತನಾಡಿ, ಮನುಷ್ಯನ ಆರೋಗ್ಯದಲ್ಲಿ ಮಾನಸಿಕ ಆರೋಗ್ಯವೂ ಮುಖ್ಯವಾಗಿದೆ. ಮಾನಸಿಕ ಸಮತೋಲನ ಕಾಪಾಡಿಕೊಳ್ಳುವುದರಿಂದ ಕೆಲಸದಲ್ಲಿ ನಮ್ಮ ಸಾಮರ್ಥ್ಯ ಸಂಪೂರ್ಣ ಬಳಕೆಯಾಗುತ್ತದೆ. ದೇಹ ಮತ್ತು ಮನಸ್ಸಿನ ಸಮನ್ವಯತೆಗೆ ಯೋಗ ಅತ್ಯಂತ ಉತ್ತಮ ಮಾಧ್ಯಮವಾಗಿದೆ ಎಂದು ತಿಳಿಸಿದರು.
ವಿವಿದ ಸಂಘಟನೆಗಳಿಂದ ಏರ್ಪಡಿಸಿದ್ದ ಯೋಗ ನೃತ್ಯ ಪ್ರದರ್ಶನ ಆಕರ್ಷಕವಾಗಿತ್ತು. ಭಾರತೀಯ ಯೋಗ ಶಿಕ್ಷಣ ಸಮಿತಿ ಡಾ. ಜೀವಂಧರ ಜೈನ್, ಎಂ.ಎಸ್.ಕೃಷ್ಣಮೂರ್ತಿ, ತರಬೇತುದಾರ ಪ್ರಕಾಶ್ ಇತರರಿದ್ದರು.