ಸಾಗರ ತಾಲೂಕಿನ ಹೊನ್ನೇಸರದ ವಿರೂಪಾಕ್ಷನ ಜಡ್ಡು ಕೆರೆಗೆ ಕೆರೆ ಸಮಿತಿ, ಕವಿ-ಕಾವ್ಯ ಟಸ್ಟ್‌ನ ಪ್ರಮುಖರು ಬಾಗಿನ ಅರ್ಪಿಸಿದರು. ವಿದ್ಯಾ ಅಕ್ಷರ, ಮಹಾಲಕ್ಷ್ಮೀ, ಗೌರಮ್ಮ, ರಮೇಶ್ ಇತರರಿದ್ದರು. 
ಶಿವಮೊಗ್ಗ

ಪ್ರಕೃತಿ ಆರಾಧನೆಯೇ ನಿಜವಾದ ಪೂಜೆ | Worship of the lake

ಸಾಗರ: ಪ್ರಕೃತಿಯನ್ನು ಆರಾಧಿಸುವುದು ಮತ್ತು ಗೌರವಿಸುವುದೇ ನಿಜವಾದ ಪೂಜೆ ಎಂದು ಹೆಗ್ಗೋಡು ನೀನಾಸಂ ರಂಗ ಕಲಾವಿದೆ ವಿದ್ಯಾ ಅಕ್ಷರ ಹೇಳಿದರು.
ತಾಲೂಕಿನ ಹೊನ್ನೇಸರದ ಚರಕ ಶ್ರಮಜೀವಿ ಆಶ್ರಮ ಸಮೀಪದ ವಿರೂಪಾಕ್ಷನ ಜಡ್ಡು ಕೆರೆಗೆ ಕೆರೆ ಸಮಿತಿ ಹಾಗೂ ಕವಿ-ಕಾವ್ಯ ಟ್ರಸ್ಟ್ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಕೆರೆ ಹಬ್ಬದಲ್ಲಿ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದರು.
ನಾನು ಬೆಳೆದಿದ್ದು ಕಾಡಿನ ಪರಿಸರದಲ್ಲಿ. ಮರ, ನೀರು, ಕೆರೆ, ಗದ್ದೆ, ತೋಟಗಳೊಂದಿಗಿನ ಬದುಕು ನನ್ನೊಳಗೆ ಪ್ರಕೃತಿಯ ಬಗ್ಗೆ ವಿಶೇಷ ಭಾವನೆ ಬೆಳೆಸಿದೆ. ಹೀಗಾಗಿ ಪ್ರಕೃತಿ ಮಡಿಲಲ್ಲಿ ರೂಪುಗೊಂಡಿರುವ ಈ ಕೆರೆಯನ್ನು ನೋಡುವುದು ನನಗೆ ಭಾವನಾತ್ಮಕ ಹಾಗೂ ವಿಶೇಷ ಅನುಭವ ಎಂದರು.
ಮನುಷ್ಯನ ಬದುಕಿಗೆ ಬೇಕಾದ ಎಲ್ಲವನ್ನೂ ಪ್ರಕೃತಿಯೇ ನೀಡುತ್ತದೆ. ಆದ್ದರಿಂದ ವ್ಯಕ್ತಿ ಪೂಜೆಗಿಂತ ಪ್ರಕೃತಿಯನ್ನು ಗೌರವಿಸುವುದು ಮುಖ್ಯ. ಕೆರೆಗೆ ಬಾಗಿನ ಅರ್ಪಿಸುವುದೇ ಒಂದು ಭಾವನಾತ್ಮಕ ವಿಷಯ ಎಂದು ತಿಳಿಸಿದರು.
ಚರಕದ ಅಧ್ಯಕ್ಷೆ ಮಹಾಲಕ್ಷ್ಮೀ ಮಾತನಾಡಿ, ನಮ್ಮ ಸಂಸ್ಥೆ ಕೆರೆ ನಿರ್ಮಾಣಕ್ಕಾಗಿ ತನ್ನ ಸುಮಾರು ಅರ್ಧ ಎಕರೆ ಜಾಗವನ್ನು ಬಿಟ್ಟುಕೊಟ್ಟಿದೆ. ಸಿಬ್ಬಂದಿ ಹಾಗೂ ಗ್ರಾಮಸ್ಥರು ಶ್ರಮದಾನದ ಮೂಲಕ ಕೆರೆ ಅಭಿವೃದ್ಧಿಪಡಿಸಿದ್ದಾರೆ. ಕೆರೆ ತುಂಬಿರುವುದರಿಂದ ಕೆಳಭಾಗದ ಜಮೀನುಗಳ ಬಾವಿಗಳಲ್ಲಿ ನೀರು ಹೆಚ್ಚಾಗಿದೆ. ಅಂತರ್ಜಲ ಮರುಪೂರಣಕ್ಕೆ ಸಾಕ್ಷಿಯಾಗಿದೆ. ಮುಖ್ಯವಾಗಿ ಪರಿಸರ ಹಾಗೂ ರೈತರಿಗೆ ಅನುಕೂಲ ಆಗುತ್ತಿರುವುದು ಸಂತಸ ತಂದಿದೆ ಎಂದರು.
ಚರಕ ಸಂಸ್ಥಾಪಕ ಪ್ರಸನ್ನ, ಸಂಸ್ಥಾಪಕ ಅಧ್ಯಕ್ಷೆ ಗೌರಮ್ಮ, ಉಪಾಧ್ಯಕ್ಷೆ ನಾಗರತ್ನ, ಕಾರ್ಯದರ್ಶಿ ಎನ್.ರಮೇಶ್, ಸಿಇಒ ಟೆರೆನ್ಸ್ ಪೀಟರ್, ಕವಿ-ಕಾವ್ಯ ಟ್ರಸ್ಟಿಗಳಾದ ಸೀತಾರಾಂ ಕುರುವರಿ, ಸೈಯದ್ ಜಮೀರ್, ಎಸ್.ವಿ.ಮಧುರಾ, ಚರಕದ ವಿವಿಧ ವಿಭಾಗಗಳ ವ್ಯವಸ್ಥಾಪಕರಾದ ಕೃಷ್ಣ, ರುದ್ರಪ್ಪ, ಸುರೇಶ್ ಇತರರಿದ್ದರು.
=============
12 ಎಸ್‌ಜಿಆರ್ 4