ಸೊರಬದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಸಂವಿಧಾನ ದಿನಾಚರಣೆಯ ಕಾರ್ಯಕ್ರಮವನ್ನು ತಹಸೀಲ್ದಾರ್ ಮಂಜುಳಾ ಹೆಗಡಾಳ್ ಉದ್ಘಾಟಿಸಿದರು. ಯೋಗೀಶ್, ರಾಜಪ್ಪ ಮಾಸ್ಟರ್, ಆರ್.ಪುಷ್ಪಾ, ಇಕ್ಬಾಲ್ ಜಾತಿಗೇರ, ಚಂದನ್ ಇತರರಿದ್ದರು.
ಸೊರಬ: ದೇಶದ ಪ್ರಗತಿಗೆ ಸಂವಿಧಾನ ಆಶಯಗಳು ಬಹುಮುಖ್ಯ. ಅದರ ತತ್ವಗಳಡಿ ನಡೆದಾಗ ಪ್ರಜಾಪ್ರಭುತ್ವದ ಆಶಯ ಸಾಕಾರವಾಗಲಿದೆ ಎಂದು ತಹಸೀಲ್ದಾರ್ ಮಂಜುಳಾ ಹೆಗಡಾಳ್ ಹೇಳಿದರು.
ಪಟ್ಟಣದ ರಂಗಮಂದಿರದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ ದೇಶವನ್ನಾಗಿ ನಿರ್ಮಾಣ ಮಾಡುವಲ್ಲಿ ಯುವಜನತೆ ಪಾತ್ರ ದೊಡ್ಡದು ಎಂದರು.
ಉಪನ್ಯಾಸ ನೀಡಿದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಯೋಗೀಶ್, ಅಂಬೇಡ್ಕರ್ ಅವರು ಐತಿಹಾಸಿಕವಾಗಿ ಜರುಗಿದ ಘಟನೆಗಳ ಆಧಾರದ ಮೇಲೆ ಸಂವಿಧಾನ ರಚಿಸಿದರು. ಅಂಬೇಡ್ಕರ್ ಅವರು ವೈಚಾರಿಕ ಮತ್ತು ವಾಸ್ತವವಾದಿಯಾಗಿದ್ದರು. ಯುವ ಜನತೆ ಸಂವಿಧಾನದ ಆಶಯಗಳನ್ನು ಅರಿತುಕೊಂಡರೆ ಉತ್ತಮ ಜೀವನ ಹೊಂದಬಹುದು ಎಂದು ತಿಳಿಸಿದರು.
ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ರಾಜಪ್ಪ ಮಾಸ್ಟರ್, ಬಿಇಒ ಆರ್.ಪುಷ್ಪಾ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಇಕ್ಬಾಲ್ ಜಾತಿಗೇರ, ಪುರಸಭೆ ಮುಖ್ಯಾಧಿಕಾರಿ ಚಂದನ್, ತಾಪಂ ಕಚೇರಿ ಸಹಾಯಕ ನಿರ್ದೇಶಕ ಶ್ರೀರಾಮ್, ನಿಲಯ ಪಾಲಕಿ ಶೀಲಾ, ತಾಲೂಕು ನೌಕರರ ಸಂಘದ ಅಧ್ಯಕ್ಷ ಮಂಜುನಾಥ್, ಆಶ್ರಯ ಸಮಿತಿ ಅಧ್ಯಕ್ಷ ಪ್ರಶಾಂತ್ ಮೇಸಿ, ಅಬ್ದುಲ್ ರಶೀದ್, ಸುಜಾಯತ್, ಶಿವಣ್ಣ, ದಾನಪ್ಪ, ಮಾರುತಿ ಇತರರಿದ್ದರು.