ಕಿಮ್ಮನೆ ರತ್ನಾಕರ್, ಮಾಜಿ ಸಚಿವ
- ಮಾಜಿ ಸಚಿವ ಕಿಮ್ಮನೆ ಸವಾಲು
- ಬಿಜೆಪಿಯಿಂದ ಟೋಪಿ ಹಾಕುವ ಕೆಲಸ
- ಎರಡು ಮಸೂದೆಗೆ ಒಂದೇ ಮತ ಹೇಗೆ? ರತ್ನಾಕರ್ ಪ್ರಶ್ನೆ
ಶಿವಮೊಗ್ಗ: ಮಹಿಳಾ ಮೀಸಲಾತಿಗೆ ಸಂಬಂಧಿಸಿ ಲೋಕಸಭೆ (lokasabhe) ಯಲ್ಲಿ ನಡೆದ ವಿಶೇಷ ಅಧಿವೇಶನದಲ್ಲಿ (session) ಉಂಟಾದ ಹೈಡ್ರಾಮ ಹಾಗೂ ಬಿಜೆಪಿಯ ಸೈದ್ಧಾಂತಿಕ ವಿಷಯಗಳ ಬಗ್ಗೆ ನಾನು ಚರ್ಚೆಗೆ ಸಿದ್ಧ ಎಂದು ಮಾಜಿ ಸಚಿವ ಕಿಮ್ಮನೆ (kimmane) ರತ್ನಾಕರ್ ಬಿಜೆಪಿ ಮುಖಂಡರಿಗೆ ಪಂಥಾಹ್ವಾನ ನೀಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕರಾದ ಆರಗ ಜ್ಞಾನೇಂದ್ರ ಹಾಗೂ ಎಸ್.ಎನ್.ಚನ್ನಬಸಪ್ಪ ನಾಲ್ವರೂ ಚರ್ಚೆಗೆ ಬರಲಿ. ನನ್ನ ಪ್ರಶ್ನೆಗಳಿಗೆ ಉತ್ತರಿಸಲಿ. ಮಹಿಳಾ ಮೀಸಲಾತಿ ಮಸೂದೆ ಮಂಡನೆಯ ಹಿಂದೆ ಬಿಜೆಪಿಯ ಸ್ವಾರ್ಥವಿದೆ. ಆ ಪಕ್ಷ ಯಾವ ಮೂಲದಿಂದಲೂ ಮಹಿಳೆಯರನ್ನು ಗೌರವಿಸಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಮಹಿಳಾ ಮೀಸಲಾತಿ ಮಸೂದೆಯೊಂದನ್ನೇ ಸಂಸತ್‌ನಲ್ಲಿ ಮಂಡನೆ ಮಾಡುವುದನ್ನು ಬಿಟ್ಟು ಅದರ ಜತೆಗೆ ಕ್ಷೇತ್ರ ಪುನರ್ವಿಂಗಡಣೆ ಮಸೂದೆಯನ್ನೂ ಸೇರಿಸಿದ್ದು ಎಷ್ಟರಮಟ್ಟಿಗೆ ಸರಿ? ಹೀಗೆ ಮಾಡಿರುವುದು ಒಂದು ರೀತಿ ಅಪರಾಧ. ಹಾಗೆ ನೋಡಿದರೆ ನಿಜವಾಗಿಯೂ ಮಹಿಳೆಯರಿಗೆ ಅವಮಾನ ಹಾಗೂ ಅನ್ಯಾಯ ಮಾಡಿರುವುದು ಬಿಜೆಪಿಯೇ ಎಂದು ತಿರುಗೇಟು ನೀಡಿದರು.
ಎರಡು ಮಸೂದೆಗೆ ಒಂದೇ ಮತ ಚಲಾಯಿಸುವುದು ಹೇಗೆ? ಒಂದು ಮಸೂದೆ ಬಗ್ಗೆ ಒಲವಿದ್ದರೆ ಇನ್ನೊಂದರ ಬಗ್ಗೆ ವಿರೋಧವಿರುತ್ತದೆ. ಯಾವ ಆಧಾರದಲ್ಲಿ ಮತ ಹಾಕುವುದು? ಇದನ್ನು ಯಾವ ರೀತಿ ಪರಿಗಣಿಸಲಾಗುತ್ತದೆ? ಎರಡೂ ಮಸೂದೆಗೆ ಒಂದೇ ಮತ ಎಂಬುದೇ ಮೂರ್ಖತನದ್ದು. ಇದು ಬೇರೆಯವರಿಗೆ ಟೋಪಿ ಹಾಕುವ ಕೆಲಸ ಎಂದು ದೂರಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್, ಜಿಪಂ ಮಾಜಿ ಸದಸ್ಯ ಕಲಗೋಡು ರತ್ನಾಕರ್, ಪಾಲಿಕೆ ಮಾಜಿ ಸದಸ್ಯ ಬಿ.ಎ.ರಮೇಶ್ ಹೆಗ್ಡೆ, ತೀರ್ಥಹಳ್ಳಿ ತಾಪಂ ಮಾಜಿ ಸದಸ್ಯ ಕೆಸ್ತೂರು ಮಂಜುನಾಥ್ ಸುದ್ದಿಗೋಷ್ಠಿಯಲ್ಲಿದ್ದರು.
ಮಹಿಳಾ ಮೀಸಲಾತಿ ಮಸೂದೆ ಮಂಡಿಸುವ ತರಾತುರಿ ಏನಿತ್ತು? ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆ ಮುಗಿದ ಮೇಲೆ, ಇಲ್ಲವೆ ಫಲಿತಾಂಶ ಪ್ರಕಟವಾದ ಮೇಲೂ ಮಂಡನೆಗೆ ಅವಕಾಶವಿತ್ತಲ್ಲವೇ? ನಾವು ಮಾತ್ರ ಬುದ್ಧಿವಂತರು ಉಳಿದವರೆಲ್ಲಾ ದಡ್ಡರು ಎಂದು ಬಿಜೆಪಿಯವರು ಭಾವಿಸಿದಂತಿದೆ. ತಡವಾಗಿಯಾದರೂ ದೇಶದ ಜನರಿಗೆ ಸತ್ಯ ಗೊತ್ತಾಗುತ್ತಿದೆ. ಕಾಂಗ್ರೆಸ್‌ನ ಮೇಲೆ ತಪ್ಪು ಹೊರಿಸುವುದು ಎಷ್ಟು ಸರಿ. ಎಲ್ಲವನ್ನೂ ಜನರು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಕಿಮ್ಮನೆ ರತ್ನಾಕರ್ ಹೇಳಿದರು.
ಖರ್ಗೆ ಹೇಳಿಕೆಗೆ ಸಮರ್ಥನೆ
ಬಿಜೆಪಿ ಹಾಗೂ ಆರ್‌ಎಸ್‌ಎಸ್ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ್ದ ವಿವಾದಾತ್ಮಕ ಹೇಳಿಕೆಯನ್ನು ಸಮರ್ಥಿಸಿಕೊಂಡ ಕಿಮ್ಮನೆ, ವಿಷಜಂತುಗಳನ್ನು ಕೊಲ್ಲಬೇಕು ಎಂದಿರುವುದು ಸೈದ್ಧಾಂತಿಕ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತ್ರ. ಹಾಗಂತ ಮನುಷ್ಯರನ್ನು ಕೊಲ್ಲು ಎಂದರ್ಥವಲ್ಲ. ಖರ್ಗೆ ಅವರ ಹೇಳಿಕೆಯನ್ನು ನಾನು ಸಮರ್ಥಿಸುತ್ತೇನೆ. ಬಿಜೆಪಿ ಹಾಗೂ ಆರ್‌ಎಸ್‌ಎಸ್ ಅನ್ನು ವಿಷಜಂತು ಎಂದು ಕರೆದಿರುವುದರಲ್ಲಿ ತಪ್ಪೇನಿಲ್ಲ ಎಂದರು.