ಮಹಿಳಾ ಮೀಸಲಾತಿ ಜಾರಿ ಸಂಬಂಧ ನಡೆಯಲಿರುವ ಸಂಸತ್ ವಿಶೇಷ ಅಧಿವೇಶನದಲ್ಲಿ ಪಾಲ್ಗೊಳ್ಳಲಿರುವ ಬಿ.ವೈ.ರಾಘವೇಂದ್ರ ಅವರನ್ನು ಮಧುರಾ ಶಿವಾನಂದ್, ಗಾಯತ್ರಿದೇವಿ ಮಲ್ಲಪ್ಪ, ಸುರೇಖಾ ಮುರಳೀಧರ್ ಮತ್ತಿತರರು ಅಭಿನಂದಿಸಿದರು. 
ಶಿವಮೊಗ್ಗ

ಕೇಂದ್ರದಿಂದ ಮಹಿಳಾ ಮೀಸಲಾತಿ ಜಾರಿ I women reservation

ಪ್ರಮುಖ ಮುಖ್ಯಾಂಶಗಳು

  • 2029ರ ಲೋಕಸಭಾ ಚುನಾವಣೆಯಿಂದಲೇ ಅನ್ವಯ
  • ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾಹಿತಿ
  • ರಾಜಕೀಯ ಟೀಕೆ ಬಿಟ್ಟು ಅನುಷ್ಠಾನಕ್ಕೆ ಸಹಕಾರ ನೀಡಲಿ
ಶಿವಮೊಗ್ಗ: ದೇಶದಲ್ಲಿ ಸುದೀರ್ಘ ಅವಧಿಗೆ ಅಧಿಕಾರ ನಡೆಸಿದ್ದ ಕಾಂಗ್ರೆಸ್ (congress) ಮಹಿಳೆಯರನ್ನು ವೋಟ್ (vote) ಬ್ಯಾಂಕ್ ಎಂದು ಪರಿಗಣಿಸಿದ್ದರು. ಆದರೆ ನರೇಂದ್ರ ಮೋದಿ (modi) ನೇತೃತ್ವದ ಸರ್ಕಾರ 2029ರ ಲೋಕಸಭೆ ಚುನಾವಣೆಯಿಂದ ಮಹಿಳಾ ಮೀಸಲಾತಿ ಅನುಷ್ಠಾನಕ್ಕೆ ಮುಂದಾಗಿರುವುದು ಐತಿಹಾಸಿಕ ನಿರ್ಧಾರ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ಜನಸಂಘದ ಸಂಸ್ಥಾಪಕರ ಆಶಯದಂತೆ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು, ಬಿಎನ್‌ಎಸ್ ಜಾರಿ, ಸಂಸತ್, ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33 ಮೀಸಲಾತಿ ಕಲ್ಪಿಸುವ ನಾರಿಶಕ್ತಿ ವಂದನಾ ಅಧಿನಿಯಮ ಸ್ವೀಕಾರ ಮತ್ತಿತರ ಐತಿಹಾಸಿಕ ಕ್ಷಣಕ್ಕೆ ಪ್ರತ್ಯಕ್ಷ ಸಾಕ್ಷಿಯಾಗುವ ಅವಕಾಶವನ್ನು ಕ್ಷೇತ್ರದ ಜನರು ನನಗೆ ಕಲ್ಪಿಸಿಕೊಟ್ಟರು. ಈಗ ಮಹಿಳಾ ಮೀಸಲಾತಿ ಜಾರಿ ಕುರಿತಂತೆ ನಡೆಯುವ ವಿಶೇಷ ಅಧಿವೇಶನದಲ್ಲಿ ಪಾಲ್ಗೊಳ್ಳುವ ಅವಕಾಶ ನನ್ನದಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾರಿಶಕ್ತಿ ವಂದನಾ ಅಧಿನಿಯಮ ಸ್ವೀಕಾರ ಸಂದರ್ಭದಲ್ಲೂ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿತ್ತು. ಈಗ ಅದನ್ನು ಜಾರಿಗೊಳಿಸಲು ಮುಂದಾದಾಗ ಚುನಾವಣೆ ಗಿಮಿಕ್ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತಿತರ ಕಾಂಗ್ರೆಸ್ ನಾಯಕರು ಟೀಕಿಸುತ್ತಿದ್ದಾರೆ. ಇಂತಹ ರಾಜಕೀಯ ಟೀಕೆಗಳನ್ನು ಬಿಟ್ಟು ಮಹಿಳಾ ಮೀಸಲಾತಿ ಅನುಷ್ಠಾನಕ್ಕೆ ಕಾಂಗ್ರೆಸ್ ಸಹಕಾರ ನೀಡಬೇಕು ಎಂದರು.
ಮಹಿಳೆಗೆ ಕಾನೂನು ರೂಪಿಸುವ ಸಂಸತ್ ಹಾಗೂ ವಿಧಾನ ಮಂಡಲದಲ್ಲೂ ಹೆಚ್ಚಿನ ಪಾಲು ನೀಡಲು ನರೇಂದ್ರ ಮೋದಿ ಮುಂದಾಗಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಧುರಾ ಶಿವಾನಂದ್, ನಿಕಟಪೂರ್ವ ಅಧ್ಯಕ್ಷೆ ಗಾಯತ್ರಿದೇವಿ ಮಲ್ಲಪ್ಪ, ಉಪಾಧ್ಯಕ್ಷೆ ಪದ್ಮಿನಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರಾಜ್, ಮಾಲತೇಶ್, ಸುರೇಖಾ ಮುರಳೀಧರ್, ಸರಸ್ವತಿ ಸುದ್ದಿಗೋಷ್ಠಿಯಲ್ಲಿದ್ದರು.
ಮಹಿಳೆಯರಿಗೆ 270 ಸ್ಥಾನ
ಲೋಕಸಭೆಗೆ 2029ಕ್ಕೆ ನಡೆಯುವ ಚುನಾವಣೆಗೂ ಪೂರ್ವದಲ್ಲಿ ಕ್ಷೇತ್ರಗಳನ್ನು ಮರುವಿಂಗಡಣೆ ಮಾಡುವ ಉದ್ದೇಶ ಕೇಂದ್ರ ಸರ್ಕಾರದ್ದಾಗಿದೆ. ಈಗಾಗಲೇ ಸಂಸತ್ ಸದಸ್ಯರೆಲ್ಲರಿಗೂ ಕ್ಷೇತ್ರ ಮರುವಿಂಗಡಣೆಯ ತಾತ್ಕಾಲಿಕ ಕರಡು ಪ್ರತಿ ನೀಡಲಾಗಿದೆ. ಇದರ ಪ್ರಕಾರ ಪ್ರಸ್ತುತ 543 ಲೋಕಸಭಾ ಕ್ಷೇತ್ರಗಳು 850ಕ್ಕೆ ಏರಿಕೆಯಾಗಲಿದೆ. ಈ ಪೈಕಿ ಮಹಿಳೆಯರಿಗೆ 270 ಸ್ಥಾನ ಮೀಸಲಾಗಿರುತ್ತದೆ ಎಂದು ಬಿ.ವೈ.ರಾಘವೇಂದ್ರ ಹೇಳಿದರು.

ರಾಜ್ಯಕ್ಕೆ ಅನ್ಯಾಯವಾಗಲ್ಲ

ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಯಾದರೆ ಜನಸಂಖ್ಯೆ ಆಧಾರದಲ್ಲಿ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಲಿದೆ. ಉತ್ತರದ ರಾಜ್ಯಗಳು ಹೆಚ್ಚು ಕ್ಷೇತ್ರಗಳನ್ನು ಹೊಂದಲಿವೆ ಎಂದು ಕಾಂಗ್ರೆಸ್ ಟೀಕಿಸುತ್ತಿದೆ. ಆದರೆ ಅದು ವಾಸ್ತವವಲ್ಲ. ಪ್ರಸ್ತುತ ಇರುವ ಸೀಟುಗಳು ಶೇ. 50ರಷ್ಟು ಹೆಚ್ಚಳವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿಯೇ ಭರವಸೆ ನೀಡಿದ್ದಾರೆ. ಆ ಪ್ರಕಾರ ಕರ್ನಾಟಕದಲ್ಲಿ ಹಾಲಿ ಇರುವ 28 ಲೋಕಸಭಾ ಕ್ಷೇತ್ರಗಳ ಸಂಖ್ಯೆ 42ಕ್ಕೆ ಹೆಚ್ಚಲಿದೆ. ರಾಜ್ಯದಲ್ಲಿ ಸೀಟುಗಳನ್ನು ಹೆಚ್ಚಿಸುವ ಸಂಬಂಧ ಚರ್ಚೆ ನಡೆದಾಗ ನಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಪ್ರಧಾನಿ ಗಮನಕ್ಕೆ ತರಲು ಕರ್ನಾಟಕದ ಸಂಸದರು ಬದ್ಧರಿದ್ದೇವೆ ಎಂದು ಬಿವೈಆರ್ ಭರವಸೆ ನೀಡಿದರು. ಈಗ ಬಿಡುಗಡೆ ಮಾಡಿರುವ ಕರಡು ಪ್ರತಿಯಲ್ಲಿ ಕ್ಷೇತ್ರ ಮರುವಿಂಗಡಣೆಗೆ ಜನಸಂಖ್ಯೆ ಆಧಾರವೇ ಅಥವಾ ಮತದಾರರ ಸಂಖ್ಯೆಯನ್ನು ಪರಿಗಣಿಸಲಾಗುತ್ತದೆಯೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಮುಂದಿನ ದಿನಗಳಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ ಎಂದರು.


ಹೊಸನಗರ ಕ್ಷೇತ್ರಕ್ಕೆ ಬೆಂಬಲ

ಹೊಸನಗರ ವಿಧಾನಸಭಾ ಕ್ಷೇತ್ರ ಘೋಷಣೆ ಮಾಡಬೇಕೆಂಬ ಸ್ಥಳೀಯರ ಆಗ್ರಹಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಗುಜರಾತ್‌ನಿಂದ ಕೇರಳದವರೆಗೆ ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಅನೇಕ ಸಮಸ್ಯೆಗಳಿವೆ. ಇಲ್ಲಿನ ಪ್ರದೇಶದ ವ್ಯಾಪ್ತಿ ದೊಡ್ಡದು. ಆದರೆ ಜನಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಇಲ್ಲ. ಹೀಗಾಗಿ ಹೊಸನಗರ ಕ್ಷೇತ್ರ ರಚನೆ ಸಂದರ್ಭದಲ್ಲಿ ಮತದಾರರು, ಜನಸಂಖ್ಯೆ ಪ್ರಮಾಣ ಪರಿಗಣಿಸದೆ ಅದರ ವ್ಯಾಪ್ತಿ ಮಾತ್ರ ನೋಡಬೇಕು ಎಂದು ಬಿ.ವೈ.ರಾಘವೇಂದ್ರ ಒತ್ತಾಯಿಸಿದರು.

ಇಂಡಿಗೋ ಸಮಸ್ಯೆ

ನಾನು ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಇಂಡಿಗೋ ವಿಮಾನ ಸಂಸ್ಥೆಯವರೊಂದಿಗೆ ಸಾಕಷ್ಟು ಬಾರಿ ಮಾತನಾಡಿದ್ದೇವೆ. ಅವರು ಬರೆದ ಪತ್ರದ ಪ್ರಕಾರ ವಿಮಾನ ಹಾಗೂ ಪೈಲೆಟ್‌ಗಳ ಕೊರತೆಯಿಂದ ಅವರು ಶಿವಮೊಗ್ಗ-ಬೆಂಗಳೂರು ವಿಮಾನ ಸಂಚಾರವನ್ನು ಸ್ಥಗಿತಗೊಳಿಸುತ್ತಿದ್ದಾರೆ. ನನಗೆ ಸಿಕ್ಕ ಮಾಹಿತಿ ಪ್ರಕಾರ ಶಿವಮೊಗ್ಗ-ಬೆಂಗಳೂರು ಮಾರ್ಗ ಉಡಾನ್ ಯೋಜನೆ ವ್ಯಾಪ್ತಿಯಲ್ಲಿ ಬಾರದ ಕಾರಣ ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಶೇ. 50ಕ್ಕಿಂತ ಕಡಿಮೆ ಪ್ರಯಾಣಿಕರಿದ್ದರೆ ಪ್ರತಿ ಸೀಟಿಗೆ 500 ರೂ. ರಾಜ್ಯ ಸರ್ಕಾರದಿಂದಲೇ ಭರಿಸಲಾಗುತ್ತಿತ್ತು. 2025ಕ್ಕೆ ಈ ಒಪ್ಪಂದ ಮುಕ್ತಾಯವಾಗಿತ್ತು. ಬೀದರ್‌ನಲ್ಲೂ ಇಂಡಿಗೂ ವಿಮಾನಕ್ಕೆ ಇದೇ ರೀತಿ ಯಡಿಯೂರಪ್ಪ ಹಣ ನೀಡಿದ್ದರು. ಈ ಬಗ್ಗೆ ಸಚಿವ ಎಂ.ಬಿ.ಪಾಟೀಲ್ ಅವರ ಜತೆಗೆ ಮಾತನಾಡಿದ್ದೇನೆ. ಒಪ್ಪಂದ ಮುಂದುವರಿಸುವಂತೆ ಮನವಿ ಮಾಡಿದ್ದೇನೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
"

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೈಟ್‌ಲ್ಯಾಂಡಿಂಗ್ ವ್ಯವಸ್ಥೆ ವಿಳಂಬವಾಗುತ್ತಿದೆ. ಮಳೆಗಾಲ ಆರಂಭವಾಗುವುದರಿಂದ ವಿಮಾನ ಸಂಚಾರ ಪದೇಪದೆ ರದ್ದಾಗುವ ಸಾಧ್ಯತೆ ಇದೆ. ಇದರ ಜತೆಗೆ ಸರ್ಕಾರದಿಂದ ವಿಮಾನಯಾನ ಸಂಸ್ಥೆಗೆ ರಾಜ್ಯ ಸರ್ಕಾರ ನೀಡುವ ಸಹಾಯಧನ ಒಪ್ಪಂದ ರದ್ದಾಗಿದೆ. ಹೀಗಾಗಿ ಇಂಡಿಗೋ ಸಂಸ್ಥೆ ಸೇವೆ ರದ್ದುಗೊಳಿಸಲು ತೀರ್ಮಾನಿಸಿರಬಹುದು.