ಸಾಗರದಲ್ಲಿ ಆಯೋಜಿಸಿದ್ದ ಬ್ಯೂಟಿಷಿಯನ್ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮದರ್ ತೆರೆಸಾ ಕೌಶಲ್ಯ ಅಭಿವೃದ್ಧಿ ಕೇಂದ್ರದ ಮುಖ್ಯಸ್ಥೆ ಮರಿಯಾ ಲೀಮಾ ಪ್ರಮಾಣ ಪತ್ರ ವಿತರಿಸಿದರು. ಮೀರಾಬಾಯಿ, ಕೆ.ವಿ.ಪ್ರವೀಣ್ ಇತರರಿದ್ದರು.
ಸಾಗರ: ಮೂರು ದಶಕಗಳಿಂದ ಮಹಿಳೆಯರಿಗೆ ಸ್ವಯಂ ಉದ್ಯೋಗದ ಬಗ್ಗೆ ತರಬೇತಿ ನೀಡುವ ಕೆಲಸವನ್ನು ನಮ್ಮ ಸಂಸ್ಥೆಗಳು ಜಂಟಿಯಾಗಿ ಮಾಡುತ್ತಿವೆ ಎಂದು ಮದರ್ ತೆರೆಸಾ ಕೌಶಲ್ಯ ಅಭಿವೃದ್ಧಿ ಕೇಂದ್ರದ ಮುಖ್ಯಸ್ಥೆ ಮರಿಯಾ ಲೀಮಾ ಹೇಳಿದರು.
ಸಾಗರದಲ್ಲಿ ಮದರ್ ತೆರೆಸಾ ಕೌಶಲ್ಯ ಅಭಿವದ್ದಿ ಸಂಸ್ಥೆ ಮತ್ತು ಜನಶಿಕ್ಷಣ ಸಂಸ್ಥೆಯಿಂದ ಮೂರು ತಿಂಗಳುಗಳ ಕಾಲ ನಡೆದ ಬ್ಯೂಟಿಷಿಯನ್ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಬೇರೆ ಬೇರೆ ವಲಯಗಳಲ್ಲಿ ಮಹಿಳೆಯರಿಗೆ ಸಂಸ್ಥೆಯಿಂದ ತರಬೇತಿ ನೀಡಲಾಗುತ್ತಿದೆ. ತರಬೇತಿ ಪಡೆದವರಿಗೆ ಸ್ವಯಂ ಉದ್ಯೋಗ ನಡೆಸುವ ಕುರಿತು ಸೂಕ್ತ ಮಾರ್ಗದರ್ಶನ ನೀಡಲಾಗುತ್ತದೆ. ಈ ಬಾರಿ ಬ್ಯೂಟಿಷಿಯನ್ ತರಬೇತಿ ಶಿಬಿರಕ್ಕೆ 20ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದರು. ಅವರು ಸ್ವಂತ ಉದ್ಯೋಗ ಮಾಡಲು ಬ್ಯಾಂಕ್‌ನಿಂದ 10ರಿಂದ 15 ಲಕ್ಷ ರೂ.ವರೆಗೆ ಸಾಲ ಸೌಲಭ್ಯ ಸಿಗುತ್ತದೆ. ಜತೆಗೆ ಟೈಲರಿಂಗ್ ಮತ್ತಿತರರ ತರಬೇತಿ ನೀಡಲಾಗುತ್ತಿದೆ ಎಂದರು.
ಎಎಸ್‌ಐ ಮೀರಾಬಾಯಿ ಮಾತನಾಡಿ, ಹಲವು ವರ್ಷಗಳಿಂದ ಸಂಸ್ಥೆಯುಮಹಿಳೆಯರ ಬದುಕಿಗೆ ದಾರಿದೀಪವಾಗುತ್ತಿದೆ. ನೀವು ಕಲಿತಿದ್ದನ್ನು ಇನ್ನೊಬ್ಬರಿಗೆ ಕಲಿಸಿದರೆ ಅವರು ಸ್ವಯಂ ಉದ್ಯೋಗಿಗಳಾಗಿ ಮಹಿಳಾ ಸಬಲೀಕರಣ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ವಕೀಲ ಕೆ.ವಿ.ಪ್ರವೀಣ್ ಮಾತನಾಡಿ, ಮಹಿಳೆಯರು ಸ್ವಯಂ ಉದ್ಯೋಗ ಕಲಿತು ಆರ್ಥಿಕವಾಗಿ ಸದೃಢರಾದರೆ ಗೌರವಯುತ ಜೀವನ ನಡೆಸಲು ಸಾಧ್ಯವಾಗುತ್ತದೆ. ಪ್ರಸ್ತುತ ಸ್ವಯಂ ಉದ್ಯೋಗಕ್ಕೆ ಬೇರೆಬೇರೆ ಹಂತದಲ್ಲಿ ಸಹಕಾರ ಸಿಗುತ್ತಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕಾದರೆ ಇಂತಹ ಶಿಬಿರಗಳಲ್ಲಿ ತರಬೇತಿ ಪಡೆಯುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು. ಶೀತಲ್, ಲತಾ, ರೇಣುಕಾ, ಸ್ಫೂರ್ತಿ, ಎಸ್.ಡಿ.ಪವಿತ್ರಾ, ಪ್ರಿಯಾಂಕಾ ಇತರರಿದ್ದರು.