ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ  
ಶಿವಮೊಗ್ಗ

ಅಟಲ್ ಯೋಜನೆಗೆ ಜಿಲ್ಲೆಯಲ್ಲಿ ವ್ಯಾಪಕ ಸ್ಪಂದನೆ | Atal Pension Yojana

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಟಲ್ ಪಿಂಚಣಿ ಯೋಜನೆ
  • ಜಿಲ್ಲೆಯಲ್ಲಿ 1,58,401 ಮಂದಿ ಅಟಲ್ ಪಿಂಚಣಿ ಯೋಜನೆಯಡಿ ಸೇರ್ಪಡೆ
  • ಯೋಜನೆಗೆ ನೋಂದಣಿ ಮಾಡಿಕೊಳ್ಳುವಂತೆ ಬಿ.ವೈ.ರಾಘವೇಂದ್ರ ಮನವಿ
ಶಿವಮೊಗ್ಗ: ಅಸಂಘಟಿತ ವಲಯದ ಲಕ್ಷಾಂತರ ಕಾರ್ಮಿಕರಿಗೂ ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆ ಖಾತ್ರಿಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಟಲ್ ಪಿಂಚಣಿ ಯೋಜನೆ(Atal Pension Yojana)ಗೆ ಶಿವಮೊಗ್ಗ ಜಿಲ್ಲೆಯಲ್ಲಿ ವ್ಯಾಪಕ ಸ್ಪಂದನೆ ದೊರೆತಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ಅಟಲ್ ಪಿಂಚಣಿ ಯೋಜನೆಯ ಅನುಷ್ಠಾನ, ಫಲಾನುಭವಿಗಳ ಸಂಖ್ಯೆ(Number of beneficiaries), ಮಹಿಳೆಯರ ಭಾಗವಹಿಸುವಿಕೆ, ಯೋಜನೆಯ ಆರ್ಥಿಕ ಬಲ ಹಾಗೂ ಕರ್ನಾಟಕ ಮತ್ತು ಜಿಲ್ಲಾವಾರು ಕೇಳಿದ್ದ ಮಾಹಿತಿಯನ್ನು ಸಂಸತ್ತಿನಲ್ಲಿ ಕೇಂದ್ರ ಸರ್ಕಾರ(Central Government) ಒದಗಿಸಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ 1,58,401 ಮಂದಿ ಅಟಲ್ ಪಿಂಚಣಿ ಯೋಜನೆಯಡಿ ಸೇರ್ಪಡೆಯಾಗಿದ್ದು, ಅವರಲ್ಲಿ 79,584 ಮಹಿಳೆಯರಿದ್ದಾರೆ. ಇದು ಜಿಲ್ಲೆಯಲ್ಲಿಯೂ ಯೋಜನೆಗೆ ಗಣನೀಯ ಪ್ರಮಾಣದ ನೋಂದಣಿ ಆಗಿರುವುದನ್ನು ತೋರಿಸುತ್ತದೆ ಎಂದು ಹೇಳಿಕೆ ನೀಡಿದ್ದಾರೆ.
2026ರ ಜೂ.30ರ ವೇಳೆಗೆ ದೇಶಾದ್ಯಂತ 9,29,47,723 ಮಂದಿ ಅಟಲ್ ಪಿಂಚಣಿ ಯೋಜನೆಗೆ ಸೇರ್ಪಡೆಯಾಗಿದ್ದು, ಅವರಲ್ಲಿ 4,56,98,133 ಮಹಿಳೆಯರು ಸೇರಿದ್ದಾರೆ. ಯೋಜನೆಯಡಿ ಸುಮಾರು 57,296 ಕೋಟಿ ರೂ. ನಿಧಿಯನ್ನು ನಿರ್ವಹಿಸಲಾಗುತ್ತಿದೆ. ಕರ್ನಾಟಕ(Karnataka)ದಲ್ಲಿ 52,72,744 ಮಂದಿ ನೋಂದಣಿ ಮಾಡಿಕೊಂಡಿದ್ದು, ಅವರಲ್ಲಿ 25,10,470 ಮಹಿಳೆಯರಿದ್ದಾರೆ ಎಂದು ತಿಳಿಸಿದ್ದಾರೆ.
ರೈತರು, ಕೂಲಿ ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ಸ್ವಯಂ ಉದ್ಯೋಗಿಗಳು ಸೇರಿ ಅಸಂಘಟಿತ ವಲಯ(Unorganized sector)ದಲ್ಲಿ ದುಡಿಯುವ ಲಕ್ಷಾಂತರ ಜನರಿಗೆ ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆ ಹಾಗೂ ಪಿಂಚಣಿ ಸೌಲಭ್ಯ(Pension facility) ತಲುಪಿಸಲು ಅಟಲ್ ಪಿಂಚಣಿ ಯೋಜನೆ ಜಾರಿಗೆ ತಂದಿದೆ. ದುಡಿಯುವ ಅವಧಿಯಲ್ಲಿ ನಿಯಮಿತ ಉಳಿತಾಯವನ್ನು ಪ್ರೋತ್ಸಾಹಿಸುವ ಮೂಲಕ 60 ವರ್ಷಗಳ ನಂತರ ಖಚಿತ ಆದಾಯದ ಭರವಸೆ ಈ ಯೋಜನೆ ನೀಡುತ್ತದೆ. ಅರ್ಹ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಯೋಜನೆಗೆ ನೋಂದಣಿ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.